ಇಂದೋರ್: ನಿನ್ನೆ ದೇಶಾದ್ಯಂತ ರಕ್ಷಾ ಬಂಧನ ಹಬ್ಬವನ್ನ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಈ ವೇಳೆ ರಾಕಿ ಕಟ್ಟುವ ಸಹೋದರಿಯರಿಗೆ ಅಣ್ಣ, ತಮ್ಮಂದಿರು ಏನಾದರೂ ವಿಶೇಷ ಉಡುಗೊರೆ ನೀಡುವುದು ಪದ್ದತಿ. ಆದರೆ ಮಧ್ಯಪ್ರದೇಶದ ಪಾಲ್‌ಪುರ ಜಿಲ್ಲೆಯ ಪಿರ್ ಪಿಪ್ಲಿಯಾ ಗ್ರಾಮದಲ್ಲಿ ವಿಶೇಷ ಘಟನೆಯೊಂದು ನಡೆದಿದೆ.
1992ರಲ್ಲಿ ಗಡಿ ಕಾಯುತ್ತಿದ್ದ ವೇಳೆ ಯೋಧ ಮೋಹನ ಸಿಂಗ್ ಹುತಾತ್ಮರಾಗಿದ್ದರು. ಅಂದಿನಿಂದಲೂ ಹುತಾತ್ಮ ಯೋಧ ಮೋಹನ್ ಸಿಂಗ್ ಪತ್ನಿ ರಾಜು ಬಾಯಿ, ಇಬ್ಬರು ಮಕ್ಕಳು ಮುರಿದ ಗುಡಿಸಲಿನಲ್ಲೇ ಜೀವನ ನಡೆಸುತ್ತಿದ್ದರು. ಇವರಿಗೆ ರಾಜ್ಯ, ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಿರಲಿಲ್ಲ. ಪ್ರತಿ ತಿಂಗಳು ಬರುತ್ತಿದ್ದ 700ರೂ ಮಾಸಿಕ ಪಿಂಚಣಿಯಲ್ಲೇ ಜೀವನ ನಡೆಸುತ್ತಿದ್ದರು. ಇದೀಗ ಗ್ರಾಮಸ್ಥರೆಲ್ಲರೂ ಸೇರಿ ಯೋಧನ ಕುಟುಂಬಕ್ಕೆ ನೆರವಾಗಿದ್ದು, ಬರೋಬ್ಬರಿ 11 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ರಕ್ಷಾ ಬಂಧನದ ದಿನ ಗಿಫ್ಟ್ ಆಗಿ ನೀಡಿದ್ದಾರೆ.
ಇನ್ನು ಮನೆಯೊಳಗೆ ಹುತಾತ್ಮ ಯೋಧನ ಪತ್ನಿಯನ್ನ ಕಳುಹಿಸುತ್ತಿದ್ದ ವೇಳೆ ಗ್ರಾಮಸ್ಥರು ನೆಲದ ಮೇಲೆ ತಮ್ಮ ಕೈಗಳನ್ನಿಟ್ಟು ಅದರ ಮೇಲೆ ನಡೆಸಿ ಮನೆಯೊಳಗೆ ಕಳುಹಿಸಿದ್ದಾರೆ. ಇನ್ನು ಈ ಮನೆ ಕಟ್ಟಿಕೊಡಲು ಗ್ರಾಮಸ್ಥರು ಪಕ್ಕದ ಊರಿನವರಿಂದಲೂ ಹಣ ದೇಣಿಗೆಯಾಗಿ ಪಡೆದುಕೊಂಡಿರುವುದು ವಿಶೇಷ.
ಇದೀಗ ಗ್ರಾಮಸ್ಥರೆಲ್ಲರೂ ಸೇರಿ ಊರಿನ ಪ್ರಮುಖ ರಸ್ತೆಯಲ್ಲೇ ಹುತಾತ್ಮ ಯೋಧನ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದು, ಅದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಇನ್ನು ನಿನ್ನೆ ರಾಜು ಬಾಯಿ ಗ್ರಾಮದ ಎಲ್ಲ ಯುವಕರಿಗೂ ರಾಕಿ ಕಟ್ಟಿ ಹೊಸ ಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ.