ಹೈದರಾಬಾದ್: ಬರೋಬ್ಬರಿ 500 ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿದ್ದ ಗಂಡನನ್ನು ಕೊಲೆ ಮಾಡಿರುವ ಪತ್ನಿಯನ್ನ ಬಂಧಿಸುವಲ್ಲಿ ಹೈದರಾಬಾದ್ನ ಮಲ್ಕಜ್ಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
30 ವರ್ಷದ ಸುಕನ್ಯಾ ಬಂಧಿತ ಮಹಿಳೆ. ಮೂಲತಃ ತಮಿಳುನಾಡಿನವಳಾದ ಈಕೆ, ಜಾಮೀನಿನ ಮೇಲೆ ರಿಲೀಸ್ ಆಗಿದ್ದ ಗಂಡನ ಜೊತೆಗಿರಲು ಜೂನ್ 15ರಂದು ಹೈದರಾಬಾದ್ಗೆ ಆಗಮಿಸಿದ್ದಳು. ಆದರೆ ಪ್ರಭಾಕರನ್ ಆಗಲೇ ಮತ್ತೊಂದು ಮದುವೆ ಮಾಡಿಕೊಂಡಿದ್ದು, ಸಂಸಾರ ನಡೆಸುತ್ತಿದ್ದ. ಈ ವೇಳೆ ಸುಕನ್ಯಾಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದೇ ಆಕ್ರೋಶದಲ್ಲಿ ಗಂಡನನ್ನು ಕೊಲೆ ಮಾಡಿದ್ದಾಳೆ. ಆತನ ಮೃತದೇಹ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆಕೆಯನ್ನ ಪ್ರಶ್ನೆ ಮಾಡಿದಾಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಗಂಡ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದಿದ್ದಾಳೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಿಜಾಂಶ ಗೊತ್ತಾಗಿದೆ. ಆಗ ತಾನು ಮಾಡಿದ ತಪ್ಪನ್ನು ಆಕೆ ಒಪ್ಪಿಕೊಂಡಿದ್ದಾಳೆ. ಈಗಾಗಲೇ ಪ್ರಭಾಕರನ್ ಹಾಗೂ ಸುಕನ್ಯಾಗೆ ಮೂವರು ಮಕ್ಕಳಿವೆ ಎಂಬ ಮಾಹಿತಿ ಇದೆ.
2012ರಲ್ಲಿ ತಮಿಳುನಾಡು ಪೊಲೀಸರಿಂದ ಪ್ರಭಾಕರನ್ 500 ಕೋಟಿ ರೂ. ಬ್ಯಾಂಕ್ ಪಾಲಿಸಿ ಚೀಟಿಂಗ್ ಪ್ರಕರಣದಲ್ಲಿ ಬಂಧನವಾಗಿದ್ದ. ತದನಂತರ ಸಿಐಡಿಗೆ ಒಪ್ಪಿಸಲಾಗಿತ್ತು. ಈ ವೇಳೆ ಜಾಮೀನು ಪಡೆದುಕೊಂಡು ಹೊರ ಬಂದಿದ್ದ. ಜತೆಗೆ ಹೈದರಾಬಾದ್ನಲ್ಲಿ ಜೀವನ ನಡೆಸುತ್ತಿದ್ದ.