ಗಾಜಿಯಾಬಾದ್ (ಉತ್ತರ ಪ್ರದೇಶ): ಮದುವೆ ಮಾಡಿಸುವ ನೆಪದಲ್ಲಿ ವಿಧವೆಯೊಬ್ಬಳನ್ನು ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಮೂರು ಮಕ್ಕಳ ತಾಯಿಯಾಗಿರುವ ಸಂತ್ರಸ್ತ ಮಹಿಳೆಯ ಗಂಡ ಕಳೆದ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದ್ದಾನೆ. ಈ ವೇಳೆ ಪರಿಚಯವಾಗಿರುವ ಮಹಿಳೆ, ಮದುವೆ ಮಾಡಿಸುವ ನೆಪದಲ್ಲಿ 2 ಲಕ್ಷ ರೂಪಾಯಿಗೆ ಆಕೆಯನ್ನು ಮಾರಾಟ ಮಾಡಿದ್ದಾಳೆ. ಇದರ ಜತೆಗೆ ಲೋನಿ ಎಂಬ ಪ್ರದೇಶಕ್ಕೆ ಆಕೆಯನ್ನು ಕಳುಹಿಸಿದ್ದಾಳೆ. ಅಲ್ಲಿ ಮಹಿಳೆಗೆ ಮೂವರು ದುಷ್ಕರ್ಮಿಗಳು ಪಾನೀಯದಲ್ಲಿ ಮಾದಕ ದ್ರವ್ಯ ಹಾಕಿ ಕುಡಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ಮನೆಯಂದರಲ್ಲಿ ಕೂಡಿ ಹಾಕಿದ್ದಾರೆ.
ಪ್ರಜ್ಞೆ ಬಂದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾರಾಟ ಮಾಡಿರುವ ಮಹಿಳೆ ವಿರುದ್ಧ ದೂರು ದಾಖಲಿಸಿದ್ದು, ಬಂಧಿಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.