ಜಿನೆವಾ: ಕೋವಿಡ್-19 ಹರಡುವಿಕೆ ತಹಬದಿಗೆ ಬಾರದಿದ್ದರು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿರುವ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೊರೊನಾ ವೈರಸ್ ಅನ್ನು ನಿಂತ್ರಣಕ್ಕೆ ತಾರದೆ ಲಾಕ್‌ಡೌನ್ ಸಡಿಲಿಕೆ ನೀಡಲಾಗಿದೆ. ಇದು ಮತ್ತಷ್ಟು ಅಪಾಯಕ್ಕೆ ದೂಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕ ಸಭೆಯಲ್ಲಿ ಮಾತನಾಡಿರುವ ಅವರು, ಕೋವಿಡ್‌ಗೆ ಸರಳ ಪರಿಹಾರ ಇಲ್ಲ, ರೋಗಕ್ಕೆ ರಾಮಬಾಣವಿಲ್ಲ. ವಿಜ್ಞಾನಕ್ಕೆ ನಿಷ್ಠೆಯಾಗಿ, ಕಲಿಕೆ ಮತ್ತು ಹೊಂದಿಕೊಂಡು ಹೋಗುವ ಜೊತೆಗೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮಹಾಮಾರಿ ಮನುಷ್ಯನಿಗೆ ಅತ್ಯುತ್ತಮ ಮತ್ತು ಕೆಟ್ಟದನ್ನು ತೋರಿಸಿಕೊಟ್ಟಿದೆ. ಇದನ್ನು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಶೀಘ್ರವಾಗಿ ಸೋಂಕನ್ನು ತೊಲಗಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಎಲ್ಲರ ಸಹಕಾರದೊಂದಿಗೆ ಏನೆಲ್ಲಾ ಸಕಾರಗೊಳಿಸಬಹುದು ಮತ್ತು ಸಹಕಾರವಿಲ್ಲದೆ ಏನೆಲ್ಲಾ ಅಪಾಯಗಳು ಸಂಭವಿಸಬಹುದು ಎಂಬುದನ್ನ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಗತ್ತಿಗೆ ಬೇಕಿರುವ ಸಲಕರಣೆಗಳು, ವಿಜ್ಞಾನ ಅಥವಾ ಸಂಪನ್ಮೂಲಗಳ ಕೊರೆತೆ ಇಲ್ಲ. ಆದರೆ ಇವುಗಳನ್ನು ಬದ್ಧತೆಯಿಂದ ನಿರಂತರವಾಗಿ ಬಳಸಿಕೊಳ್ಳುವ ಕೊರೆತೆ ಇದೆ ಎಂದು ಹೇಳಿದ್ದಾರೆ.