ನೊವೆಲ್ ಕೊರೊನಾ ವೈರಸ್ ಕಾಯಿಲೆಯನ್ನು 2019ರಲ್ಲಿ ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್‍ನಲ್ಲಿ ಗಂಭೀರ ತೀವ್ರ ಉಸಿರಾಟದ ಸಮಸ್ಯೆ (ಸಾರ್ಸ್) ಯಿಂದ ಬಳಲುತ್ತಿರುವ ಕುಟುಂಬವೊಂದರಲ್ಲಿ ಗುರುತಿಸಲಾಯಿತು. ಇದನ್ನು ಕೋವಿಡ್-19 ಎಂದು ಹೆಸರಿಸಲಾಯಿತು. ಇದರಲ್ಲಿ ಕೋ ಎಂದರೆ ಕೊರೊನಾ, ವಿ ಎಂದರೆ ವೈರಸ್ ಮತ್ತು ಡಿ ಎಂದರೆ ಡಿಸೀಸ್ (ಕಾಯಿಲೆ).
ಈ ಕಾಯಿಲೆಯ ಲಕ್ಷಣಗಳು ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯನ್ನು ಒಳಗೊಂಡಿರುತ್ತದೆ.
1) ಈ ಕಾಯಿಲೆ ತೀವ್ರವಾದಲ್ಲಿ ಅದು ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಈ ಕಾಯಿಲೆ ಮಾರಣಾಂತಿಕವೂ ಆಗಬಲ್ಲದು.
2)ಕೋವಿಡ್-19 ಸೋಂಕಿತರಲ್ಲಿ ಹೆಚ್ಚಾಗಿ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೂ ಇದಕ್ಕೆ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲದೆ ಸೋಂಕಿತರು ಗಉಣಮುಖರಾಗಬಲ್ಲರು. ಆದರೆ ಹಿರಿಯ ನಾಗರಿಕರು ಅದರಲ್ಲೂ ಈಗಾಗಲೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಮಧುಮೇಹ, ಉಸಿರಾಟದ ಸಮಸ್ಯೆ ಮತ್ತು ಕ್ಯಾನ್ಸರ್‍ನಂತಹ ರೋಗಗಳಿಂದ ಬಳಲುತ್ತಿರುವವರಲ್ಲಿ ಈ ಕಾಯಿಲೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಉಂಟುಮಾಡಬಲ್ಲದು. ಹೀಗಾಗಿ ಅವರನ್ನು ಈ ಸೋಂಕು ತಗುಲದಂತೆ ಕಾಪಾಡಿಕೊಳ್ಳುವುದು ಅತೀ ತುರ್ತಾಗಿ ಆಗಬೇಕಿದೆ.
ಕೋವಿಡ್ 19 ಕಾಯಿಲೆಯು ಸೋಂಕು ನಾವು ಕೆಮ್ಮಿದಾಗ ಅಥವಾ ಸೀನಿದಾಗ ನಮ್ಮ ದೇಹದ ಮೂಲಕ ಬೀಳುವ ಹನಿಗಳ ಮೂಲಕ ಬೇರೆಯವರಿಗೆ ಹರಡುತ್ತದೆ. ಹೀಗಾಗಿ ಕೆಮ್ಮುವಾಗ ಮತ್ತು ಸೀನುವಾಗ ಕೈಯನ್ನು ಮುಖಕ್ಕೆ ಅಡ್ಡ ಇಟ್ಟು ಶಿಷ್ಟಾಚಾರವನ್ನು ಪಾಲಿಸುವುದು ಉತ್ತಮ. ವೈರಸ್ ಇರುವ ಪ್ರದೇಶಗಳನ್ನು ಮುಟ್ಟಿ ನಂತರ ಆ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣನ್ನು ಮುಟ್ಟಿಕೊಂಡರೂ ಸೋಂಕು ತಗುಲಬಹುದು. ಯಾವುದೇ ಪ್ರದೇಶ ಅಥವಾ ವಸ್ತುವಿನ ಮೇಲ್ಮೈ ಮೇಲೆ ಕೊರೋನಾ ವೈರಸ್ ಹಲವಾರು ಘಂಟೆಗಳು ಜೀವಂತವಾಗಿರುತ್ತದೆ. ಆದರೆ ಸರಳವಾಗಿರುವ ಸೋಂಕು ನಿವಾರಕಗಳನ್ನು ಬಳಸುವ ಮೂಲಕ ಅದನ್ನು ನಾಶಗೊಳಿಸಬಹುದು.
ಕೋವಿಡ್ 19 ಕಾಯಿಲೆಯನ್ನು ಉಂಟುಮಾಡುವ ವೈರಸ್‍ಗಳು ಅಡಗಿ ಕೂತು ಕಾಯಿಲೆಯನ್ನು ತ್ವರಿತವಾಗಿ ಮತ್ತು ಅಷ್ಟೇ ತೀವ್ರವಾಗಿ ಹರಡಬಲ್ಲವು. ಹೆಚ್ಚಿನ ಪ್ರದೇಶದಲ್ಲಿ ಇವುಗಳು ಸಮುದಾಯ ಮಟ್ಟದಲ್ಲಿ ಕಾಯಿಲೆಯನ್ನು ಹರಡಿವೆ. ಇವು ಜಠರ ಮತ್ತು ಕರುಳಿನಲ್ಲೂ ಕಾಣಿಸಿಕೊಂಡಿದ್ದು ಇವು ಮಲ ವಿಸರ್ಜನೆಯಲ್ಲಿ ಹೊರಹೋಗಬಲ್ಲವು. ಇವು ಮಲದ ಮೂಲಕ ಹರಡುತ್ತವೆಯೇ ಎಂಬುದರ ಕುರಿತು ಇನ್ನಷ್ಟು ಸಂಶೋಧನೆಗಳು ಆಗಬೇಕಿವೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಈಗಾಗಲೇ ಕೊರೊನಾ ವೈರಸ್ ದೃಢಪಟ್ಟಿರುವ ತಾಯಂದಿರು ಅಥವಾ ಶಂಕಿತರು ಅವರ ನವಜಾತ ಶಿಶುಗಳಿಂದ ಬೇರೆಯಿರಬೇಕೆಂದು ಶಿಫಾರಸ್ಸು ಮಾಡಿದೆ. ಇದರಿಂದಾಗಿ ಆ ಶಿಶುವಿಗೆ ಕಾಯಿಲೆ ಹರಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದಲ್ಲದೆ ಈ ಕಾಯಿಲೆಯ ಲಕ್ಷಣಗಳು ವ್ಯಕ್ತಿಯೊಬ್ಬನಲ್ಲಿ ಕಾಣಿಸಿಕೊಳ್ಳುವ ಮೊದಲೇ ಆತ ಈ ಕಾಯಿಲೆಯನ್ನು ಬೇರೆಯವರಿಗೆ ಹರಡುವ ಸಾಧ್ಯತೆಗಳಿವೆ. ಈ ಸೋಂಕು ತಗುಲಿದ 2 ರಿಂದ 14 ದಿನಗಳ ಒಳಗೆ ಯಾವಾಗ ಬೇಕಾದರೂ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಬಲ್ಲುದು.
ನಿರಂತರವಾಗಿ ಸಾಬೂನು ಮತ್ತು ನೀರಿನಿಂದ ಕೈತೊಳೆಯುವುದರಿಂದ, ಇನ್ನೊಂದು ವ್ಯಕ್ತಿಯಿಂದ ಮತ್ತು ಸೋಂಕಿತರಿಂದ ಸುಮಾರು ಒಂದು ಮೀಟರ್ (ಮೂರು ಅಡಿ) ಅಂತರವನ್ನು ಕಾಯ್ದುಕೊಳ್ಳುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಕೆಮ್ಮುವಾಗ ಮತ್ತು ಸೀನುವಾಗ ಕೈಯನ್ನು ಮುಖಕ್ಕೆ ಅಡ್ಡವಿಡುವ ಅಥವಾ ಟಿಶ್ಯು ಪೇಪರ್‍ಗಳನ್ನು ಬಳಸಿ ಅದನ್ನು ಕೂಡಲೇ ಸೂಕ್ತವಾಗಿ ವಿಲೇವಾರಿ ಮಾಡುವಂತಹ ಶಿಷ್ಟಾಚಾರದ ಕ್ರಮಗಳನ್ನು ಪಾಲಿಸುವುದು ಅಗತ್ಯ. ಕೈಗಳು ವೈರಸ್ಸನ್ನು ದೇಹದೊಳಗೆ ಸಾಗಿಸಬಹುದಾದ ಸಾಧ್ಯತೆಗಳಿರುವುದರಿಂದ ಆಗಾಗ ಕೈಗಳಿಂದ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟುತ್ತಿರಬಾರದು.
ಭಾರತಕ್ಕೆ ಪಾಠಗಳು
ಇಟೆಲಿ ದೇಶವು ಸಂಪದ್ಭರಿತ ದೇಶ ಎಂದು ಗುರುತಿಸಿಕೊಂಡಿದ್ದರೂ, ಅಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳಿದ್ದರೂ ಅಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕು ಹರಡಿದ್ದು ಮಾತ್ರವಲ್ಲದೆ ಸಾವೂ ಸಂಭವಿಸಿತು. ಇಟೆಲಿಯ ವಿವಿಧ ಪ್ರಾಂತ್ಯಗಳಲ್ಲಿ ಸಂಭವಿಸಿದ ಸಾವು ಮತ್ತು ಸೋಂಕಿತರ ಪ್ರಮಾಣದಲ್ಲಿ ಭಿನ್ನತೆ ಇದೆ. ಕೆಲವೊಂದು ಪ್ರಾಂತ್ಯದಲ್ಲಿ ಅತೀ ಹೆಚ್ಚು ಪರೀಕ್ಷೆಗಳನ್ನು ಮಾಡಲಾಯಿತು ಮತ್ತು ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗದಂತೆ ನೋಡಿಕೊಳ್ಳಲಾಯಿತು. ಜನರನ್ನು ಮನೆಯಲ್ಲಿಯೇ ಇರುವಂತೆ ಹೇಳಲಾಯಿತು. ಇದರಿಂದಾಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿ ಹೋಗದಂತೆ ಮುಂಜಾಗ್ರತೆ ವಹಿಸಲು ಸಹಾಯಕವಾಯಿತು ಮತ್ತು ಆಸ್ಪತ್ರೆಗಳಲ್ಲಿ ಈ ಕಾಯಿಲೆಯಿಂದ ಗಂಭೀರವಾಗಿ ನರಳುತ್ತಿರುವವರನ್ನು ಮಾತ್ರ ಚಿಕಿತ್ಸೆಗೆ ಒಳಪಡಿಸಲು ಸಾಧ್ಯವಾಯಿತು. ದಕ್ಷಿಣ ಕೊರಿಯಾ ಈ ಕಾಯಿಲೆಯ ವಿರುದ್ಧ ಯಶಸ್ವಿಯಾಗಿ ಹೋರಾಡಿದೆ. ಆದರೆ ಇದರ ಯಶಸ್ಸಿನಲ್ಲಿ ಕೇವಲ ಸರ್ಕಾರ ಮಾತ್ರವಲ್ಲ ಸಾರ್ವಜನಿಕರ ಪಾತ್ರವೂ ಪ್ರಮುಖ ಪಾತ್ರವಹಿಸಿದೆ.
ಇಲ್ಲಿ ದಿನವೊಂದಕ್ಕೆ 20000 ಜನರನ್ನು ಕೋವಿಡ್ ಪರೀಕೆಗೆ ಒಳಪಡಿಸಲಾಗುತ್ತಿತ್ತು ಮತ್ತು ಕೇವಲ 6 ಗಂಟೆಗಳಲ್ಲಿ ಫಲಿತಾಂಶ ಹೊರಬೀಳುತ್ತಿತ್ತು. ದಕ್ಷಿಣ ಕೊರಿಯಾದಲ್ಲಿ ಹೊಸತಾಗಿ ಸೋಂಕು ತಗುಲಿರುವವರ ಸಂಖ್ಯೆಗಳು ವರದಿಯಾಗುತ್ತಿಲ್ಲ. ಬದಲಿಗೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ವರದಿಯಾಗುತ್ತಿದೆ. ಸರ್ಕಾರಕ್ಕೆ ಮತ್ತು ಮತ್ತು ಸರ್ಕಾರದ ಬೆನ್ನಿಗೆ ಸ್ವಯಂಪ್ರೇರಿತರಾಗಿ ನಿಂತ ಅಲ್ಲಿನ ನಾಗರಿಕರಿಗೆ ಈ ಯಶಸ್ಸು ಸಲ್ಲುತ್ತದೆ. ಅಲ್ಲಿನ ಪ್ರಜೆಗಳು ಸರ್ಕಾರದ ನಿರ್ಧಾರಗಳನ್ನು ಗೌರವಿಸಿ ಅದರಂತೆಯೇ ನಡೆದುಕೊಂಡ ಕಾರಣದಿಂದಾಗಿ ಇದು ಸಾಧ್ಯವಾಯಿತು. ಅಲ್ಲಿನ ಸರ್ಕಾರ ಈ ಕಾಯಿಲೆಯನ್ನು ಪರೀಕ್ಷಿಸುವುದು, ಗುರುತಿಸುವುದು ಮತ್ತು ಚಿಕಿತ್ಸೆಯನ್ನು ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುಂಜಾಗ್ರತಾ ಕ್ರಮವನ್ನು ಇಲ್ಲಿ ಆರಂಭದಿಂದಲೇ ಅನುಸರಿಸಲಾಯಿತು. ಸಾರ್ವಜನಿಕರ ಸಹಕಾರದಿಂದಾಗಿ ಸರ್ಕಾರಕ್ಕೆ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.
ಇಡೀ ದೇಶವನ್ನೇ ಲಾಕ್‍ಡೌನ್ ಮಾಡುವ ಮೂಲಕ ಭಾರತ ಸರ್ಕಾರ ಉತ್ತಮ ನಿಲುವನ್ನೇ ತೆಗೆದುಕೊಂಡಿದೆ. ಆದರೆ ಅದರ ಅನುಷ್ಠಾನ ಮಾತ್ರ ಅಸ್ತವ್ಯಸ್ತವಾಗಿದೆ. ನಗರಗಳಲ್ಲಿದ್ದ ವಲಸಿಗರು ತಮ್ಮ ತಮ್ಮ ಊರುಗಳನ್ನು ಮತ್ತು ತಮ್ಮ ಕುಟುಂಬವನ್ನು ಸೇರಿಕೊಳ್ಳಲು ಕಿಲೋಮೀಟರ್‍ಗಟ್ಟಲೆ ದೂರ ನಡೆಯುತ್ತಿದ್ದಾರೆ. ಹೀಗೆ ಗ್ರಾಮೀಣ ಪ್ರದೇಶದ ಜನರು ಅವರ ಊರುಗಳನ್ನು ಸೇರಿಕೊಂಡರೆ ಅವರ ಮೂಲಕ ಗ್ರಾಮೀಣ ಭಾಗಗಳಿಗೂ ಈ ಸೋಂಕು ಹರಡಬಲ್ಲದು. ಹೀಗಾಗಿ ಭಾರತದಲ್ಲಿ ಈ ವಲಸಿಗರಿಗೆ ವಸತಿ, ಆಹಾರ ಮತ್ತು ಹಣಕಾಸಿನ ಸೌಲಭ್ಯವನ್ನು ಒದಗಿಸುವುದು ಮತ್ತು ಆರೋಗ್ಯ ತಪಾಸಣೆಯನ್ನು ಮಾಡಿಸುವ ಕೆಲಸಗಳು ಅತೀ ತುರ್ತಾಗಿ ಆಗಬೇಕಿದೆ.
ಪ್ರಸ್ತುತ ಭಾರತದಲ್ಲಿ ಈ ಸೋಂಕು ಎರಡನೇ ಹಂತದಲ್ಲಿದೆ. ಈ ಹಂತದಲ್ಲಿ ಇದು ಸೋಂಕಿತರೊಂದಿಗೆ ಒಡನಾಟ ಹೊಂದಿದ್ದ ವ್ಯಕ್ತಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇದುವರೆಗೂ ಈ ಕಾಯಿಲೆ ಸಮುದಾಯ ಮಟ್ಟದಲ್ಲಿ ಹರಡಿಲ್ಲ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ. ಹೀಗಾಗಿ ನಾವು ಈ ಕಾಯಿಲೆಯ ಬಗ್ಗೆ ಭಯಭೀತರಾಗುವ ಬದಲು ಇದರಿಂದುಂಟಾಗುವ ಉಸಿರಾಟದ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದನ್ನು ಕೇವಲ ಸಾಮಾಜಿಕ ಸಂತರ ಕಾಯ್ದುಕೊಳ್ಳುವ ಮೂಲಕ ಮಾತ್ರ ನಿಯಂತ್ರಿಸಬಹುದು. ಜನರು ಯಾವುದೇ ಸ್ಥಳದಲ್ಲಿ ಸೇರಬಾರದು. ಆರೋಗ್ಯ ಕಾರ್ಯಕರ್ತೆಯರು ತಮ್ಮ ವೈಯಕ್ತಿಕ ಸುರಕ್ಷತಾ ಸಲಕರಣೆಗಳನ್ನು ಬಳಸಿಕೊಂಡು ತಾವು ಈ ಸೋಂಕಿಗೆ ಒಳಗಾಗದಂತೆ ಮತ್ತು ಸೋಂಕು ಬೇರೆಯವರಿಗೆ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಭಾರತ ಸರ್ಕಾರ ತನ್ನ ಹೊಸ ಶಿಫಾರಸ್ಸಿನಲ್ಲಿ ಈ ರೋಗ ಹರಡದಂತೆ ತಡೆಯಲು ಮನೆಯಲ್ಲಿ ತಯಾರಿಸಲಾದ ಮುಖಗವಸುಗಳನ್ನು ಹಾಕಿಕೊಳ್ಳಬೇಕು ಎಂದು ಸೂಚಿಸಿದೆ.
ಹೋಮ್ ಕ್ವಾರೈಂಟೈನ್‍ನಲ್ಲಿರುವವರು ಕಡ್ಡಾಯವಾಗಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕು. ಈ ಕಾಯಿಲೆಯನ್ನು ಮಣಿಸುವಲ್ಲಿ ಮಾಡುತ್ತಿರುವ ಹೋರಾಟದಲ್ಲಿ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಬೇಕೆಂಬುದು ಈ ಸಾಂಕ್ರಾಮಿಕ ರೋಗದಿಂದ ಭಾರತ ಕಲಿಯಬೇಕಾಗಿರುವ ಪಾಠ. ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆ ಸಧ್ಯದಲ್ಲೇ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಆದರೂ ಸರ್ಕಾರ ಸೂಕ್ತ ಸಮಯದಲ್ಲಿ ಇವುಗಳನ್ನು ಪೂರೈಸುವ ಭರವಸೆ ನೀಡಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮೊದಲು ನಾವು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡು ಸನ್ನದ್ಧರಾಗಬೇಕಿದೆ. ಸುಸ್ಥಿರ ಆರೋಗ್ಯ ವರ್ತನೆಗಳನ್ನು ಪ್ರೋತ್ಸಾಹಿಸಲು ಭಾತರವು ಪ್ರಸ್ತುತ ಜಿಡಿಪಿಯ 2ಶೇಕಡಾವಲ್ಲದೆ ಇನ್ನೂ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಾಗಿ ವ್ಯಯಿಸಬೇಕಿದೆ. ಅದನ್ನು ಆರೋಗ್ಯ ಸೇವೆಗಳಿಗಾಗಿಯೇ ಮೀಸಲಿಡಬೇಕಿದೆ.
ಆದರೆ ಪ್ರಸ್ತುತ ಅತೀ ಮುಖ್ಯ ಪ್ರಶ್ನೆ ಎಂದರೆ ನೀವು ಎಷ್ಟು ಬಾರಿ ನಿಮ್ಮ ಕೈಗಳನ್ನು ತೊಳೆದುಕೊಂಡಿದ್ದೀರಿ? ನೀವು ಮುಖಗವಸುಗಳನ್ನು ಬಳಸುತ್ತಿದ್ದೀರಾ?
ಲೇಖಕರ ಕುರಿತು.
ಡಾ. ಗಿರಿಧರ ಆರ್ ಬಾಬು ಬೆಂಗಳೂರಿನ ಇಂಡಿಯನ್ ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನಲ್ಲಿ ಸಾಂಕ್ರಾಮಿಕ ರೋಗ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವೆಲ್‍ಕಮ್ ಟ್ರಸ್ಟ್-ಡಿಬಿಟಿ ಇಂಡಿಯಾ ಅಲಯೆನ್ಸ್ ಹಾಗೂ ಎಂಎಎಸಟಿಎಚ್‍ಐ ಅಧ್ಯಯನದ ಪ್ರಧಾನ ಸಂಶೋಧಕರಾಗಿದ್ದಾರೆ. ಇವರ ಆಸಕ್ತಿಯ ಸಂಶೋಧನಾ ಕ್ಷೇತ್ರವೆಂದರೆ ಸಾಂಕ್ರಾಮಿಕವಲ್ಲದ ರೋಗಗಳನ್ನು ಮೊದಲ ಹಂತದಲ್ಲೆ ಪತ್ತೆ ಹಚ್ಚಿ ಅವುಗಳ ಹರಡುವಿಕೆಗೆ ನೆರವಾಗುವುದು. ರೋಗಗಳ ಪತ್ತೆ ಹಾಗೂ ಹರಡುವಿಕೆ ತಡೆಯುವ ಅಧ್ಯಯನ ಕ್ಷೇತ್ರದಲ್ಲಿ ಇವರು ಒಂದು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.
- ಡಾ. ಗಿರೀಶ್ ಬಾಬು