ನವದೆಹಲಿ: ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದರೂ ಪೊಲೀಸರು ನಮ್ಮನ್ನು ದೆಹಲಿಗೆ ತೆರಳದಂತೆ ಸಿಂಘು ಗಡಿಯಲ್ಲೇ ತಡೆಯುತ್ತಿದ್ದಾರೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸತ್ನಾಮ್ ಸಿಂಗ್ ಪನ್ನು ಆರೋಪಿಸಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ರೈತ ಪ್ರತಿಭಟನೆ 62ನೇ ದಿನಕ್ಕೆ ಕಾಲಿಟ್ಟಿದ್ದು, 60 ದಿನಗಳವರೆಗೂ ರೈತರನ್ನು ದೆಹಲಿಗೆ ತಲುಪಲು ಬಿಡದೇ ಗಡಿಭಾಗಗಳಲ್ಲೇ ತಡೆಯಲಾಗುತ್ತಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಬಳಿಕ ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದ ರೈತರಿಗೆ ನಿನ್ನೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಅನ್ನದಾತರಿಗೆ ಅವಕಾಶ ನೀಡಿದ್ದಾರೆ. ಆದರೆ, ಕಾನೂನು ಸುವ್ಯವಸ್ಥೆ ಬಗ್ಗೆ ದೆಹಲಿ ಪೊಲೀಸರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು. ಹೀಗಾಗಿ ಇಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಯುತ್ತಿದೆ.
ಇದನ್ನೂ ಓದಿ: ಪೊಲೀಸರು - ಅನ್ನದಾತರ ನಡುವೆ ಗಲಾಟೆ: ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ
ಇಂದು ದೆಹಲಿ - ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸತ್ನಾಮ್ ಸಿಂಗ್, ನಾವು ರಿಂಗ್ ರೋಡ್ ಕಡೆ ತೆರಳಬೇಕಾಗಿದೆ, ಆದರೆ ನಮ್ಮನ್ನು ಪೊಲೀಸರು ತಡೆಯುತ್ತಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ನಮಗೆ ಅನುವು ಮಾಡಿಕೊಡಲು ನಾವು ಅವರಿಗೆ 45 ನಿಮಿಷಗಳನ್ನು ನೀಡಿದ್ದೇವೆ. ಶಾಂತಿಯುತ ಮೆರವಣಿಗೆ ಕೈಗೊಂಡಿದ್ದರೂ, ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಎಸ್ ಎಸ್ ಯಾದವ್, ನಾವು ರೈತರೊಂದಿಗೆ ಸಹಕರಿಸುತ್ತಿದ್ದು, ಅವರೂ ನಮ್ಮೊಂದಿಗೆ ಸಹಕರಿಸಿದ್ದಾರೆ. ಇದನ್ನೇ ಮುಂದುವರೆಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.