ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಲಾಕ್ಡೌನ್ ಹಂತ ಹಂತವಾಗಿ ಸಡಿಲಿಸುತ್ತಿರುವ ಸರ್ಕಾರದ ವಿರುದ್ಧ ರಾಜ್ಯಪಾಲ ಜಗದೀಪ್ ಧಾಂಕರ್ ಕಿಡಿಕಾರಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಬೆಲೆ ನೀಡದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಸುವ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಕೇಂದ್ರ ಗೃಹ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ಸಾಮಾಜಿಕ ಅಂತರದ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶಿಸಿತ್ತು.
ರಾಜ್ಯ ಸರ್ಕಾರದ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿರುವ ರಾಜ್ಯಪಾಲ ಜಗದೀಪ್ ಧಾಂಕರ್, "ಮಮತಾ ಬ್ಯಾನರ್ಜಿ ಸರ್ಕಾರ ಮೊದಲು ರಾಜಭವನದೊಂದಿಗಿನ ಲಾಕ್ಡೌನ್ ಕೊನೆಗಾಣಿಸಲಿ. ನಾವೆಲ್ಲರೂ ಕೊರೊನಾ ವೈರಸ್ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ. ಕೇಂದ್ರ ಗೃಹ ಇಲಾಖೆಯ ನಿರ್ದೇಶನಗಳನ್ನು ಅರಿತು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕೆಲಸವಾಗಲಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ವಿಫಲವಾದಲ್ಲಿ ಹಾಗೂ ಧಾರ್ಮಿಕ ಸಮಾವೇಶ ನೆಪದಲ್ಲಿ ನಿಯಮಗಳ ಉಲ್ಲಂಘನೆಯಾದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು." ಎಂದು ಟ್ವೀಟ್ ಮಾಡಿದ್ದಾರೆ.