ಭೋಪಾಲ್: ನಾನು ಬೆಂಗಳೂರಿನಲ್ಲಿ ಸೆರೆಯಾಗಿಲ್ಲ. ಶ್ರೀಘ್ರದಲ್ಲೇ ಮುಖ್ಯಮಂತ್ರಿ ಕಮಲ್ನಾಥ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಧ್ಯಪ್ರದೇಶದ ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೇರಾ ಹೇಳಿದ್ದಾರೆ.
ಕಮಲ್ನಾಥ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ನ ಮೂರು ಮತ್ತು ಓರ್ವ ಪಕ್ಷೇತರ ಶಾಸಕನನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದರು.
ಮೊನ್ನೆ ರಾತ್ರಿ 12 ಆಸನ ಮತ್ತು 9 ಆಸನದ ಎರಡು ವಿಶೇಷ ವಿಮಾನವನ್ನು ಬಿಜೆಪಿ ಬುಕ್ ಮಾಡಿತ್ತು. 12 ಆಸನದ ವಿಮಾನದಲ್ಲಿ ಕಾಂಗ್ರೆಸ್ ಶಾಸಕರಾದ ಬಿಸಾಹುಲಾಲ್ ಸಿಂಗ್, ರಘುರಾಜ್ ಕನ್ಸಾನ ಮತ್ತು ಹರ್ದೀಪ್ ಡಾಂಗ್ ಮತ್ತು ಒಬ್ಬ ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೇರಾ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಸುರೇಂದ್ರ ಸಿಂಗ್ ಶೇರಾ, ಮಗಳ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಯಾರ ಬಂಧನದಲ್ಲೂ ಇಲ್ಲ. ಆದಷ್ಟು ಬೇಗ ಮುಖ್ಯಮಂತ್ರಿ ಕಮಲ್ನಾಥ್ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.