ನವದೆಹಲಿ: ಬಿಹಾರ ಎಕ್ಸಿಟ್ ಪೋಲ್ನಲ್ಲಿ ಮಹಾಘಟಬಂಧನ್ಗೆ ಬಹುಮತದ ನಿರೀಕ್ಷೆ ಹೊರಬಿದ್ದಿದ್ದು, ಸದ್ಯ ಕಾಂಗ್ರೆಸ್ ಅಲರ್ಟ್ ಆಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಈ ಮೊದಲು ಆಪರೇಷನ್ ಕಮಲದಂತಹ ಘಟನೆಯಿಂದ ಎಚ್ಚೆತ್ತಿರುವ ಕಾಂಗ್ರೆಸ್ ಇದೀಗ ಬಿಹಾರದಲ್ಲಿ ಫಲಿತಾಂಶಕ್ಕೂ ಮೊದಲೇ ಶಾಸಕರ ಖರೀದಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಈ ಹಿನ್ನೆಲೆ ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಅವಿನಾಶ್ ಪಾಂಡೆ ಅವರನ್ನ ಶಾಸಕರ ಮೇಲೆ ಕಣ್ಣಿಡಲು ನಿಯೋಜಿಸಿದೆ.
ಇದಲ್ಲದೇ ಶಾಸಕರನ್ನು ಬೇರೆ ಪಕ್ಷದವರು ಸೆಳೆಯುವ ಮೊದಲು ಆ ಯತ್ನ ವಿಫಲಗೊಳಿಸಲು ಸೂಚಿಸಲಾಗಿದೆ. ಎನ್ಡಿಎ ಮೈತ್ರಿಕೂಟವು ಮಹಾಘಟಬಂಧನ್ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಸಾಧ್ಯತೆ ಹಿನ್ನೆಲೆ ತೀವ್ರ ನಿಗಾವಹಿಸಲು ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಸುರ್ಜೆವಾಲಾ, ಹಾಗೂ ಸ್ಕ್ರೀನಿಂಗ್ ಕಮಿಟಿಯ ಮುಖ್ಯಸ್ಥರಾಗಿರುವ ಅವಿನಾಶ್ ಪಾಂಡೆ ಅವರನ್ನ ಪಾಟ್ನಾದಲ್ಲಿ ನಿಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇತ್ತೀಚಿಗೆ ಗೋವಾ ಹಾಗೂ ಮಣಿಪುರದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ. ಈ ಘಟನೆಗಳ ಮನದಲ್ಲಿಟ್ಟುಕೊಂಡು ಕ್ರಮಕ್ಕೆ ಬರಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಜಾ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸರ್ಕಾರ ರಚನೆಯ ನಡುವೆಯೂ ಹಲವು ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್ಡಿಎ ಜೊತೆ ಕೈಜೋಡಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷಾಂತರ ಘಟನೆಗೆ ಅವಕಾಶ ನೀಡದೇ ಹೆಚ್ಚು ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಲಿದೆ ಎಂದು ಮೂಲಗಳು ತಿಳಿಸಿವೆ.