ಸುಕ್ಮಾ( ಛತ್ತೀಸ್ಗಡ): ನಕ್ಸಲರು ಸ್ಫೋಟಕ ವಸ್ತುಗಳನ್ನು ಬಳಸಿ ಧ್ವಂಸ ಮಾಡಿದ್ದ ಸೇತುವೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಸಹ ಕೈಜೋಡಿಸಿದ್ದಾರೆ.
ಏಪ್ರಿಲ್ 6 ಮತ್ತು 7 ರ ಮಧ್ಯರಾತ್ರಿ ಮಾವೋವಾದಿ ಕಾರ್ಯಕರ್ತರು, ಡೋರ್ನಪಾಲ್-ಜಾಗರಗುಂಡದ ಸೇತುವೆಯನ್ನು ಸ್ಫೋಟಕ ಬಳಸಿ ಹಾನಿಗೊಳಿಸಿದ್ದರು. ಈ ರಸ್ತೆ ಡಾರ್ನ್‌ಪಾಲ್,ಚಿಂತನಾಲ್,ಜಗರ್‌ಗುಂಡಾ ಉದ್ದಕ್ಕೂ ಇರುವ 120ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿತ್ತು ಎಂದು ಐಜಿ ಬಸ್ತರ್.ಪಿ ಸುಂದರರಾಜ್ ಹೇಳಿದ್ದಾರೆ.
ಪಡಿತರ ಪೂರೈಕೆ, ವೈದ್ಯಕೀಯ ಸೌಲಭ್ಯ ಮತ್ತು ಗ್ರಾಮಸ್ಥರ ಎಲ್ಲಾ ಇತರ ಮೂಲಭೂತ ಅವಶ್ಯಕತೆಗಳನ್ನು ಈ ರಸ್ತೆಯ ಮೂಲಕವೇ ಪೂರೈಕೆ ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಘಟನೆ ನಂತರ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ಅರೆಸೈನಿಕ ಪಡೆಗಳು ಕೊರೊನಾ ಲಾಕ್ಡೌನ್ ನಡುವೆಯೇ ಸೇತುವೆ ನಿರ್ಮಾಣ ಕಾರ್ಯ ಮಾಡಲು ಮುಂದಾಗಿದ್ದಾರೆ. ಈ ಕಾರ್ಯದಲ್ಲಿ ಗ್ರಾಮಸ್ಥರು ಸಹ ಮುಂದಾಗಿದ್ದಾರೆ ಎಂದು ಐಜಿ ಮಾಹಿತಿ ನೀಡಿದ್ದಾರೆ.
ಈ ಕೆಲಸದಲ್ಲಿ ಭಾಗಿಯಾದ ಗ್ರಾಮಸ್ಥರು ಕೊರೊನಾ ಹಿನ್ನೆಲೆ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಕೆಲಸ ಮಾಡಿದರು. ಅಮಾನವೀಯ ಮತ್ತು ಅನಗತ್ಯವಾದ ಈ ರೀತಿಯ ಕೆಲಸವನ್ನು ನಕ್ಸಲರು ಯಾಕೆ ಮಾಡುತ್ತಾರೆ ಎಂಬುದು ಯಾರಿಗೂ ತಿಳಿಯದಂತಾಗಿದೆ ಎಂದು ಇದೇ ವೇಳೆ ಐಜಿ ಬಸ್ತರ್ ಬೇಸರ ವ್ಯಕ್ತಪಡಿಸಿದರು.