ನವದೆಹಲಿ: ಕುಖ್ಯಾತ ರೌಡಿ ವಿಕಾಸ್ ದುಬೆ ಎನ್ಕೌಂಟರ್ಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗವನ್ನು ಪುನಾರಚನೆ ಮಾಡುವಂತೆ ಹಾಗೂ ಆಯೋಗದಲ್ಲಿರುವ ಮಾಜಿ ಡಿಜಿಪಿ ಕೆಎಲ್ ಗುಪ್ತಾ ಅವರನ್ನು ಬದಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಬಂಧಿಸಲು ತೆರಳಿದ್ದ ಪೊಲೀಸರನ್ನು ದುಬೆ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದು, ತದನಂತರ ಜುಲೈ 10ರಂದು ವಿಕಾಸ್ ದುಬೆ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದ. ಈ ಸಂಬಂಧ ದುಬೆ ಎನ್‌ಕೌಂಟರ್ ತನಿಖೆಗೆ ನ್ಯಾಯಾಂಗ ಆಯೋಗದ ಮುಖ್ಯಸ್ಥರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್, ಇತರ ಇಬ್ಬರು ಸದಸ್ಯರಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಶಿ ಕಾಂತ್ ಅಗರ್ವಾಲ್ ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಗುಪ್ತಾ ಅವರನ್ನು ನೇಮಿಸಲಾಗಿದೆ.
ಈ ಕುರಿತು ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಕ್ಷಾತೀತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸುವಂತೆ ಕೋರಿದ್ದಾರೆ. ಗುಪ್ತಾ ಅವರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ಅವಸ್ಥಿ, ತನಿಖೆಯ ಮುಕ್ತಾಯಕ್ಕೆ ಮುಂಚೆಯೇ, ದುಬೆ ಎನ್‌ಕೌಂಟರ್ ಉದ್ದೇಶ ಪೂರ್ವಕವಾಗಿ ಮಾಡಲಾಗಿಲ್ಲ, ಅದು ಆಕಸ್ಮಿಕವಾಗಿ ಸಂಭವಿಸಿರುವುದು ಎಂದು ಗುಪ್ತಾ ಹೇಳಿದ್ದಾರೆ. ಈ ಹೇಳಿಕೆ ಅನುಮಾನಾಸ್ಪದವಾಗಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸಬೇಕು ಎಂದು ಅವಸ್ಥಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ಧಾರೆ.
ಸುಪ್ರೀಂಕೋರ್ಟ್ ರಚಿಸಿರುವ ಆಯೋಗದಲ್ಲಿ ಗುಪ್ತಾ ಬದಲಿಗೆ ಐಸಿ ದಿವೇದಿ, ಜಾವೇದ್ ಅಹ್ಮದ್, ಪ್ರಕಾಶ್ ಸಿಂಗ್ ಅಥವಾ ಇನ್ನಾವುದೇ ಮಾಜಿ ಡಿಜಿಪಿಗಳನ್ನು ಸೇರಿಸಬಹುದು ಎಂದು ಅರ್ಜಿಯಲ್ಲಿ ಸೂಚಿಸಿದ್ದಾರೆ.