ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕಾರ್ಯ ನಿರ್ವಹಣಾಧಿಕಾರಿ ಮಂಡಳಿ 34 ಸದಸ್ಯರನ್ನು ಹೊಂದಿದೆ.
ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿರುವ ಡಾ. ಹರ್ಷವರ್ಧನ್, ಸದ್ಯ ಎದುರಾಗಿರುವ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಜಾಗತಿಕ ಸಹಭಾಗಿತ್ವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಲಿದೆ. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ಈ ಹುದ್ದೆಗೇರುತ್ತಿರುವ ಬಗ್ಗೆ ಅರಿವಿದೆ. ಮುಂದಿನ 2 ದಶಕಗಳಲ್ಲಿ ಹಲವಾರು ಆರೋಗ್ಯ ಸವಾಲುಗಳು ಎದುರಾಗಲಿವೆ. ಎಲ್ಲಾ ಸವಾಲುಗಳನ್ನು ಸಮನಾವಾಗಿ ಸ್ವೀಕರಿಸಬೇಕಿದೆ ಎಂದಿದ್ದಾರೆ.
ಇಂದು ನಡೆದ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಭಾರತದ ಅಭ್ಯರ್ಥಿಯ ಆಯ್ಕೆ ಪ್ರಸ್ತಾಪಕ್ಕೆ 194 ರಾಷ್ಟ್ರಗಳು ಸಹಿ ಮಾಡಿವೆ. ಕಾರ್ಯನಿರ್ವಹಣಾಧಿಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲು ಕೆಳದ ವರ್ಷ ನಡೆದಿದ್ದ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಮತ್ತು ಪೂರ್ವ ಏಷ್ಯಾ ಗ್ರೂಪ್ ಒಮ್ಮತದಿಂದ ಭಾರತದ ಅಭ್ಯರ್ಥಿ ಆಯ್ಕೆಗೆ ಒಮ್ಮತ ವ್ಯಕ್ತಪಡಿಸಿದ್ದವು. 2020ರ ಮೇ ನಿಂದ ಮುಂದಿನ 3 ವರ್ಷಗಳ ಕಾಲ ಡಾ. ಹರ್ಷವರ್ಧನ್ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.