ವಾರಣಾಸಿ: ಅಪರಾಧ ಎಸಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಾರಣಾಸಿ ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ಗಳನ್ನು ತಯಾರಿಸುವ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಜೈಲಿನಲ್ಲಿ 1,800ಕ್ಕೂ ಹೆಚ್ಚು ಕೈದಿಗಳಿದ್ದು, ಅವರಲ್ಲಿ ಹೆಚ್ಚಿನವರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಕೇವಲ ಮಾಸ್ಕ್ ಮಾತ್ರವಲ್ಲದೆ, ಹ್ಯಾಂಡ್ ಸ್ಯಾನಿಟೈಸರ್ಗಳನ್ನೂ ತಯಾರಿಸುತ್ತಿದ್ದಾರೆ ಎಂದು ಜೈಲರ್ ಬಿಬಿ ಪಾಂಡೆ ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಿಂದಲೇ ಸ್ಯಾನಿಟೈಸರ್ ತಯಾರಿಸಲಾಗುತ್ತಿದೆ. ಬೇವಿನ ಎಲೆ, ಅಲೋವೆರಾ ಮತ್ತು ತೋಟದಲ್ಲಿನ ಇತರ ಹೂವುಗಳನ್ನು ಬೆರೆಸಿ ಕುದಿಸಲಾಗುತ್ತದೆ. ನಂತರ ಸ್ಪಲ್ಪ ಸ್ಪಿರಿಟ್ಅನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಜೈಲು ಅಧಿಕಾರಿಗಳು ಈ ಉತ್ಪನ್ನಗಳನ್ನು ಕಳುಹಿಸಲು ತೀರ್ಮಾನಿಸಿದ್ದಾರೆ.