ಖತಿಮಾ (ಉತ್ತರಾಖಂಡ): ನೇಪಾಳದ ಕೆಲವು ಪ್ರಜೆಗಳು ಇಂಡೋ - ನೇಪಾಳದ ಗಡಿಯಲ್ಲಿರುವ ಚಂಪಾವತ್ ಜಿಲ್ಲೆಯ ತನಜ್ಪುರ ಬಳಿಯ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದಕ್ಕೆ ಯತ್ನಿಸಿದಾಗ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ)ಯ ಯೋಧರು ಅದನ್ನು ತಡೆದಿದ್ದಾರೆ.
ಮೂಲಗಳ ಪ್ರಕಾರ ಕೆಲವರು ಪಿಲ್ಲರ್ ನಂಬರ್ 811ರ ಬಳಿ ಮದ್ಯಪಾನ ಮಾಡಿದ ಕೆಲವು ನೇಪಾಳಿ ಪ್ರಜೆಗಳು ಬಫರ್ ಝೋನ್ನಲ್ಲಿ ತಂತಿಬೇಲಿಯನ್ನು ಅಳವಡಿಸಲು ಮುಂದಾಗಿದ್ದರು. ಈ ವೇಳೆ, ಸ್ಥಳಕ್ಕೆ ಧಾವಿಸಿದ ಎಸ್ಎಸ್ಬಿ ಯೋಧರು ಹಾಗೂ ಸ್ಥಳೀಯ ಪೊಲೀಸರು ಅವರನ್ನು ತಡೆದಿದ್ದಾರೆ.
ಇದು ನೇಪಾಳ ಹಾಗೂ ಭಾರತದ ಗಡಿಯಲ್ಲಿ ಆಗಾಗ ಸಂಭವಿಸುವ ವಿದ್ಯಮಾನವಾಗಿದ್ದು, ಎಸ್ಎಸ್ಬಿ ಹಾಗೂ ಎಪಿಎಫ್ ( ಸಶಸ್ತ್ರ ಪೊಲೀಸ್ ಪಡೆ) ಅವರನ್ನು ತಡೆಯುವ ಕೆಲಸ ಮಾಡುತ್ತಲೇ ಬಂದಿವೆ. ಘಟನೆ ನಂತರ ಎಸ್ಎಸ್ಬಿ ಹಾಗೂ ಎಪಿಎಫ್ ಈ ಕುರಿತಂತೆ ಸಭೆ ನಡೆಸಿದೆ. ಮುಂದಿನ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.
ಪಿಲ್ಲರ್ ನಂಬರ್ 811 ಪ್ರದೇಶ ಭಾರತ ಮತ್ತು ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಯಾರೂ ಬರಬಾರದೆಂದು( ನೋ ಮ್ಯಾನ್ಸ್ ಲ್ಯಾಂಡ್ ) ಎರಡೂ ರಾಷ್ಟ್ರಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದಂತೆ ಯಾವ ರಾಷ್ಟ್ರವೂ ಕೂಡಾ ಆ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳುವಂತಿಲ್ಲ. ಈಗ ನೇಪಾಳದ ಪ್ರಜೆಗಳು ಈ ಸ್ಥಳದಲ್ಲಿ ದಾಂಧಲೆಗೆ ಯತ್ನಿಸಿದ್ದು, ಅಪಾಯಕಾರಿಯಾಗಿ ಗೋಚರಿಸುತ್ತಿದೆ.
ನೇಪಾಳಿಗಳ ಈ ವರ್ತನೆಗೆ ಕಾರಣವೇನಿರಬಹುದು..?
ಕೆಲವು ದಿನಗಳ ಹಿಂದೆ ನೇಪಾಳದ ಎಫ್ಎಂ ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರ ಜೊತೆಗೆ ಭಾರತ ಹಾಗೂ ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶಗಳಾದ ಕಾಲಾಪಾನಿ, ಲಿಪುಲೇಕ್, ಲಿಂಪಿಯಾದುರ ಪ್ರದೇಶಗಳು ತಮ್ಮವೇ ಎಂಬಂತೆ ಜನರನ್ನು ನಂಬಿಸಲು ಅಲ್ಲಿನ ಹವಾಮಾನ ವರದಿಯನ್ನೂ ಕೂಡಾ ಪ್ರಸಾರ ಮಾಡಲಾಗುತ್ತಿತ್ತು.
ಕಳೆದ ಎರಡು ದಿನಗಳ ಹಿಂದೆ ನೇಪಾಳ ಸಶಸ್ತ್ರ ಪೊಲೀಸ್ ಪಡೆ (ಎನ್ಎಪಿಎಫ್) ಬಿಹಾರದ ಕೃಷ್ಣಗಂಜ್ ಜಿಲ್ಲೆಯಲ್ಲಿ ಫೈರಿಂಗ್ ನಡೆಸಿ, ಓರ್ವ ಭಾರತೀಯ ಪ್ರಜೆಯನ್ನು ಗಾಯಗೊಳಿಸಿತ್ತು. ಈ ವೇಳೆ, ಎರಡು ರಾಷ್ಟ್ರಗಳ ನಡುವೆ ವೈಮನಸ್ಯ ಮತ್ತಷ್ಟು ಹೆಚ್ಚಾಗಿ ಈ ರೀತಿಯ ಘಟನೆಗಳಿಗೆ ಇಂಬು ಕೊಟ್ಟಿರಬಹುದೆಂದು ಹೇಳಲಾಗುತ್ತಿದೆ.