ರಾಜಸಮಂದ್ (ರಾಜಸ್ಥಾನ): ಲಾಕ್‌ಡೌನ್ ಸಮಯವನ್ನು ಅಚ್ಚುಕಟ್ಟಾಗಿ ಉಪಯೋಗಿಸಿಕೊಂಡಿರುವ ರಾಜಸ್ಥಾನದ ರಾಜಸಮಂದ್ನ ಅವಿಭಕ್ತ ಕುಟುಂಬವೊಂದು, ತಮ್ಮ ಮನೆಯ ಎದುರಿಗೆ ಬಾವಿಯನ್ನು ಅಗೆಯುವ ಮೂಲಕ ತಮ್ಮದೇ ಆದ ನೀರಿನ ಮೂಲವನ್ನು ಕಂಡುಕೊಂಡಿದೆ.
ಉಪ್ಲಿಯ ಓಡಾನ್ ಗ್ರಾಮದ ಈ ಕುಟುಂಬವೂ ತಮ್ಮದೇ ಆದ ಬಾವಿಯೊಂದನ್ನು ಹೊಂದಿತ್ತು. ಆದ್ರೆ ಅದರಲ್ಲಿ ನೀರು ಇರಲಿಲ್ಲ. ಹೀಗಾಗಿ ಲಾಕ್‌ಡೌನ್ ವೇಳೆಯ ಸಮಯವನ್ನು ಬಳಸಿಕೊಳ್ಳಲು ನಿರ್ಧರಿಸಿದ ಕುಟುಂಬ ನೀರಿಗಾಗಿ ಬಾವಿಯನ್ನು ಅಗೆಯಲು ನಿರ್ಧರಿಸಿತು.
"ನಾವು ಸುಮಾರು 25 ವರ್ಷಗಳಿಂದ ಈ ಹಳೆಯ ಬಾವಿಯನ್ನು ಉಪಯೋಗಿಸುತ್ತಿದ್ವಿ. ಲಾಕ್‌ಡೌನ್ ಸಮಯದಲ್ಲಿ, ನಮಗೆ ಏನೂ ಕೆಲಸವಿರಲಿಲ್ಲ. ಹಾಗಾಗಿ ಮತ್ತೊಂದು ಬಾವಿಯನ್ನು ಅಗೆಯಲು ಯೋಚಿಸಿದ್ವಿ" ಎಂದು ಕುಟುಂಬದ ಮುಖ್ಯಸ್ಥ ದಯಶಂಕರ್ ಪ್ರಜಾಪತ್ ಹೇಳುತ್ತಾರೆ.
"ಬಾವಿಯನ್ನು ಅಗೆಯಲು ಕುಟುಂಬದ ಎಲ್ಲ ಸದಸ್ಯರು ಕೊಡುಗೆ ನೀಡಿದ್ದಾರೆ ಮತ್ತು ನಾವು ಅಗೆಯಲು ಯಂತ್ರೋಪಕರಣಗಳನ್ನು ಬಳಸಲಿಲ್ಲ. ಬಾವಿ ಈಗ 25 ಅಡಿ ಆಳದಲ್ಲಿದೆ, ಇದರಲ್ಲಿ 10-12 ಅಡಿ ನೀರು ಇದೆ. ನಮ್ಮ ನೆರೆಹೊರೆಯವರಿಗೂ ಸಹ ನಾವು ನೀರನ್ನು ಒದಗಿಸಿದ್ದೇವೆ" ಎಂದು ಅವರು ಹೇಳುತ್ತಾರೆ.
"ನಾವು ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡುತ್ತಿದ್ದೆವು. ಇದರ ನಡುವೆ ಒಂದು ಗಂಟೆ ವಿಶ್ರಾಂತಿ ಪಡೆಯುತ್ತಿದ್ದೇವು. ನಾವು ಈ ಕೆಲಸದಲ್ಲಿ ಹೆಚ್ಚು ಪರಿಣತರಲ್ಲದಿದ್ದರೂ, ದಿನ ಅಗೆಯುತ್ತಿದ್ದರಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು" ಎಂದು ಪ್ರಜಾಪತ್ ಅವರ ಮಗ ಹೇಳಿದರು.
ಹಳ್ಳಿಯ ಸರ್ಪಂಚ್ ಕುಟುಂಬಸ್ಥರ ಪ್ರಯತ್ನವನ್ನು ಶ್ಲಾಘಿಸಿದ್ದು, ಲಾಕ್‌ಡೌನ್ ವೇಳೆ ಸಮಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಇತರ ಗ್ರಾಮಸ್ಥರಿಗೆ ಉದಾಹರಣೆಯಾಗಿದ್ದಾರೆ ಎಂದರು.