ವಾಷಿಂಗ್ಟನ್: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತಕ್ಕೆ ಅಮೆರಿಕ 21 ಕೋಟಿ ರೂಪಾಯಿ ಹಣಕಾಸಿನ ನೆರವು ಘೋಷಿಸಿದೆ.
ಮಾರಕ ವೈರಾಣುವಿನಿಂದ ತೀವ್ರ ನಷ್ಟಕ್ಕೆ ಒಳಗಾಗುತ್ತಿರುವ ಹಾಗೂ ಒಳಗಾಗಿರುವ 64 ರಾಷ್ಟ್ರಗಳಿಗೆ ಅಮೆರಿಕ ಸಹಾಯ ಹಸ್ತ ಚಾಚಿದೆ. ಈ ಎಲ್ಲಾ ರಾಷ್ಟ್ರಗಳಿಗೆ ಒಟ್ಟು 274 ಮಿಲಿಯನ್ ಅಮೆರಿಕನ್ ಡಾಲರ್ಗಳ ಧನಸಹಾಯ ಘೋಷಿಸಿದೆ. ಈ ಆರ್ಥಿಕ ನೆರವಿನಿಂದ ವೈದ್ಯಕೀಯ ಲ್ಯಾಬೋರೇಟರಿಗಳ ಸ್ಥಾಪನೆ, ಕೊರೊನಾ ಸೋಂಕಿತರ ಪತ್ತೆ ಹಾಗೂ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ಸ್ ಮೈಕ್ ಪೊಂಪಿಯೋ, ಹೊಸದಾಗಿ ಸುಮಾರು 110 ಮಿಲಿಯನ್ ಡಾಲರ್ ಹಣವನ್ನು ಆರೋಗ್ಯ ತುರ್ತು ಪರಿಸ್ಥಿತಿಗೆ ಘೋಷಿಸಿದ್ದೇವೆ. ಇದರ ಜೊತೆಗೆ ಜಾಗತಿಕ ವಿಪತ್ತು ನಿರ್ವಹಣೆಗೆ ಇದ್ದ 110 ಮಿಲಿಯನ್ ಡಾಲರ್ ನಿಧಿಯನ್ನು ಸೇರಿಸಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ರಾಷ್ಟ್ರಗಳಿಗೆ ನೆರವು ನೀಡಿದ್ದೇವೆ ಎಂದಿದ್ದಾರೆ.
ಈ ನೆರವು ಪ್ರಾರಂಭಿಕ ಹಂತವಾಗಿದ್ದು ವಿಶ್ವ ಆರೋಗ್ಯ ಸಂಘಟನೆ, ಯುನಿಸೆಫ್ ಹಾಗೂ ಇತರ ಜಾಗತಿಕ ಸಂಘ,ಸಂಸ್ಥೆಗಳೊಂದಿಗೆ ಚರ್ಚಿಸಿ ಮತ್ತಷ್ಟು ನೆರವನ್ನು ಘೋಷಿಸುವ ಪ್ರಯತ್ನ ಮಾಡಲಾಗುತ್ತದೆ. ಜಾಗತಿಕ ಆರೋಗ್ಯ ಹಾಗೂ ಸುರಕ್ಷತೆ ವಿಚಾರದಲ್ಲಿ ಕೊರೊನಾ ವಿರುದ್ಧ ಅಮೆರಿಕ ಸಮರ ಸಾರುತ್ತದೆ ಎಂದಿರುವ ಪೊಂಪಿಯೋ, ಅಮೆರಿಕದ ಉದ್ಯಮಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಮುಂತಾದ ಮೂಲಗಳಿಂದ ಸುಮಾರು 1.5 ಬಿಲಿಯನ್ ಡಾಲರ್‌ನಷ್ಟು ನೆರವು ಹರಿದುಬಂದಿದೆ. ಕೊರೊನಾದಿಂದ ಅಮೆರಿಕವನ್ನು ಪಾರುಮಾಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.