ನವದೆಹಲಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಮೂಲಸೌಕರ್ಯಗಳನ್ನು ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಹಾಗೂ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಮೇಲಿನ ಅಮೆರಿಕ ಆಯೋಗ ಆರೋಪ ಮಾಡಿದೆ.
ಪಾಕಿಸ್ತಾನದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರನ್ನು ನಿರ್ಲಕ್ಷಿಸಲಾಗುತ್ತಿದ್ದು, ಕೊರೊನಾ ವೈರಸ್ ಸಮಸ್ಯೆಯ ವೇಳೆ ಮತ್ತಷ್ಟು ಸಮಸ್ಯೆಗಳನ್ನು ಇದು ಸೃಷ್ಟಿಸುತ್ತದೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವನ್ನು ಆಯೋಗ ದೂರಿದೆ.
ಇತ್ತೀಚೆಗೆ ಸೆಲಾನಿ ವೆಲ್ಫೇರ್ ಇಂಟರ್ನ್ಯಾಷನಲ್ ಟ್ರಸ್ಟ್ ಎಂಬ ಸರ್ಕಾರೇತರ ಸಂಸ್ಥೆ ಹಿಂದೂ ಹಾಗೂ ಕ್ರೈಸ್ತರಿಗೆ ಆಹಾರ ನೀಡಲು ನಿರಾಕರಿಸಿ ಕೇವಲ ಮುಸ್ಲಿಂ ಸಮುದಾಯಕ್ಕೆ ಆಹಾರ ಒದಗಿಸಿದ್ದನ್ನು ಅಮೆರಿಕ ಆಯೋಗ ಉಲ್ಲೇಖಿಸಿದೆ.
ಈ ಬಗ್ಗೆ ಮಾತನಾಡಿರುವ ಆಯೋಗದ ಮುಖ್ಯಸ್ಥ ಅನುರಿಮಾ ಭಾರ್ಗವ್, ''ಕೊರೊನಾ ಪಾಕಿಸ್ತಾನದಲ್ಲೂ ತೀವ್ರವಾಗಿ ವ್ಯಾಪಿಸುತ್ತಿದೆ. ಈ ವೇಳೆ ಧರ್ಮಾತೀತವಾಗಿ ಎಲ್ಲರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಯಾರದ್ದೋ ನಂಬಿಕೆಗೆ ಮತ್ಯಾರಿಗೋ ಆಹಾರವನ್ನು ನಿರಾಕರಿಸುವುದು ಒಳ್ಳೆಯದಲ್ಲ'' ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಗತ್ತು ಹಸಿವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದೆ. ಇದನ್ನು ತಡೆಯಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ ಎಂದಿದ್ದರು. ಕೊರೊನಾ ವೇಳೆಯಲ್ಲಿ ಜನರನ್ನು ರಕ್ಷಿಸಬೇಕೆಂದು ಮನವಿ ಮಾಡಿದ್ದರು.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಮೇಲಿನ ಅಮೆರಿಕ ಆಯೋಗ ಎಲ್ಲಾ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಯಾವ ರೀತಿ ಇದೆ ಎಂಬುದನ್ನು ವಿಶ್ಲೇಷಿಸುವ ಸಂಸ್ಥೆಯಾಗಿದೆ.