ಗೊಂಡಾ (ಉತ್ತರ ಪ್ರದೇಶ): ಜಿಲ್ಲೆಯ ಪಾಸ್ಕಾ ಗ್ರಾಮದಲ್ಲಿ ಸೋಮವಾರ ರಾತ್ರಿ ಮಲಗಿದ್ದ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಯನ್ನು ಪರಸ್ಪುರ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸುಟ್ಟ ಗಾಯಗಳಾಗಿರುವ 17, 12 ಮತ್ತು ಏಳು ವರ್ಷ ವಯಸ್ಸಿನ ಸಹೋದರಿಯರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಶಿಕಾ ಅಕಾ ಚೋಟು ಬಂಧಿತ. ಮಂಗಳವಾರ ಸಂಜೆ ಹುಜೂರ್‌ಪುರ ಪ್ರದೇಶದಲ್ಲಿ ಬಂಧಿಸಲು ಹೋದಾಗ ಆರೋಪಿ, ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದರು. ಆರೋಪಿಯ ಬೈಕ್, ಆತನ ಬಳಿಯಿದ್ದ ಪಿಸ್ತೂಲ್ ಮತ್ತು ಕಾಟ್ರಿಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ: ಮೂವರು ಸಹೋದರಿಯರು ತಮ್ಮ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದಾಗ ರಾಸಾಯನಿಕ ವಸ್ತುವಿನಿಂದ ದಾಳಿ ನಡೆಸಿದ್ದಾರೆ. ಯಾವ ರಾಸಾಯನಿಕ ಬಳಸಲಾಗಿದೆ ಎಂಬುದರ ಕುರಿತು ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಬಾಲಕಿಯರು ಸ್ಥಿರವಾಗಿದ್ದು, ಒಬ್ಬರಿಗೆ ಶೇ.30ರಷ್ಟು ಸುಟ್ಟ ಗಾಯಗಳಾಗಿದ್ದು, ಇಬ್ಬರು ಶೇ.20 ಮತ್ತು ಶೇ.7ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಗೊಂಡಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದರು.