ಬುಲಂದ್ಶಹರ್ (ಉತ್ತರ ಪ್ರದೇಶ): ಅತ್ಯಾಚಾರ ಸಂತ್ರಸ್ತೆಯಾಗಿದ್ದ 15 ವರ್ಷದ ದಲಿತ ಬಾಲಕಿ ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾಳೆ. ಆಗಸ್ಟ್ನಲ್ಲಿ ಈ ಅತ್ಯಾಚಾರದ ಘಟನೆ ನಡೆದಿದ್ದು, ಆರೋಪಿ ವಿರುದ್ಧ ಬಾಲಕಿ ಪೋಷಕರು ದೂರು ಪ್ರಕರಣ ದಾಖಲಿಸಿದ್ದರು.
ಅತ್ಯಾಚಾರ ನಡೆದ ಕೆಲ ದಿನಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಬಂಧಿತನ ಬೆಂಬಲಿಗರು ಪ್ರಕರಣ ಹಿಂಪಡೆಯುವಂತೆ ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿದ್ದರು. ಪೋಷಕರು ಅದಕ್ಕೊಪ್ಪದ ಕಾರಣ ಮನೆಯಲ್ಲಿ ಯಾರಿಲ್ಲದ ವೇಳೆ ಏಳು ಮಂದಿ ಮನೆಗೆ ನುಗ್ಗಿ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬುಲಂದ್ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಮಾತನಾಡಿ, ಆಗಸ್ಟ್ನಲ್ಲಿ ಸ್ಥಳೀಯ ನಿವಾಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಆತನನ್ನು ಬಂಧಿಸಲಾಗಿದೆ. ಮಂಗಳವಾರ (ನ.17) ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಗೆ ಬೆಂಕಿ ಹಚ್ಚಲಾಗಿದೆ. ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇಂದು ಕೂಡ ಅದೇ ಜನರಿಂದ ನಿತ್ಯ ಕಿರುಕುಳ ನಡೆಯುತ್ತಿದೆ ಎಂದು ಸಾವಿಗೂ ಮುನ್ನ ಸಂತ್ರಸ್ತೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾಳೆ. ಪೋಕ್ಸೊ ಮತ್ತು ಎಸ್ಸಿ/ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೆಂಕಿ ಹಚ್ಚಿ ಜೈಲು ಸೇರಿರುವವರು ಅತ್ಯಾಚಾರ ನಡೆಸಿದ್ದ ಆರೋಪಿಯ ಸಂಬಂಧಿಕರು ಮತ್ತು ಪರಿಚಯಸ್ಥರು ಎಂದು ಸಂತ್ರಸ್ತೆಯ ಕುಟುಂಬ ತಿಳಿಸಿದೆ.
ಸಂತ್ರಸ್ತೆಯ ಚಿಕ್ಕಪ್ಪ ಮಾತನಾಡಿ, ಸೋಮವಾರ ರಾತ್ರಿ ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಪ್ರಕರಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಮಗೆ ಬೆದರಿಕೆ ಹಾಕಿದ್ದರು. ಮಂಗಳವಾರ ಬೆಳಗ್ಗೆ 9.30ಕ್ಕೆ ಬಾಲಕಿ ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ ಆಕೆಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.