ಲಖನೌ(ಉತ್ತರಪ್ರದೇಶ): ಏಪ್ರಿಲ್ 15ರ ನಂತರ ರಾಜ್ಯ ಸರ್ಕಾರವು ಕೆಲ ಸಮಿತಿಗಳನ್ನು ರಚಿಸಲಿದೆ. ಈ ಸಮಿತಿಗಳು ವಿವಿಧ ಹಂತದಲ್ಲಿ ಕೊರೊನಾ ವಿರುದ್ಧ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಅಧ್ಯಕ್ಷತೆಯಲ್ಲಿ ನಾವು ಒಂದು ಸಮಿತಿ ರಚಿಸಿದ್ದೇವೆ. ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಈ ಸಮಿತಿ ಕೆಲಸ ಮಾಡುತ್ತದೆ. ಹಾಗೆಯೇ ಕಾರ್ಮಿಕರಿಗೆ ಕೆಲಸ ಮಾಡುವ ವ್ಯವಸ್ಥೆಯನ್ನು ಈ ಮುಖಾಂತರ ಮಾಡುತ್ತೇವೆ ಎಂದರು.
ವಿಡಿಯೋ ಸಂದೇಶದಲ್ಲಿ ಸಿಎಂ ಈ ಬಗ್ಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಯಶಸ್ವಿಯಾಗಿ ನಡೆಸಲು ಯುಪಿ ಸರ್ಕಾರ ಕೊಡುಗೆ ನೀಡುತ್ತದೆ. ರಾಜ್ಯದಲ್ಲಿ ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಕೆಲ ಸಮಿತಿಗಳನ್ನು ಸ್ಥಾಪಿಸಿದೆ. ಇದು ಏಪ್ರಿಲ್ 15ರ ನಂತರ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಅವರ ಅಧ್ಯಕ್ಷತೆಯಲ್ಲಿ ಆದಾಯದ ಹರಿವನ್ನು ಹೇಗೆ ಹೆಚ್ಚಿಸುವುದು ಎಂಬ ಬಗ್ಗೆ ಸಮಿತಿ ಕೆಲಸ ಮಾಡುತ್ತದೆ. ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ರಾಜ್ಯ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ರೈತರ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಎಂದಿದ್ದಾರೆ.
ಧಾರ್ಮಿಕ ಮುಖಂಡರಿಗೆ ಮನವಿ ಮಾಡಿದ ಸಿಎಂ, ಮುಂಬರುವ ದಿನಗಳಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಬರುತ್ತವೆ. ಅಲ್ಲಿ ಜನದಟ್ಟಣೆ ಆಗದಂತೆ ಜವಾಬ್ದಾರಿವಹಿಸಿ ಎಂದು ಸೂಚನೆ ನೀಡಿದರು. ಏಪ್ರಿಲ್ 14 ರಂದು ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಸಚಿವರು ಮತ್ತು ಅಧಿಕಾರಿಗಳಿಗೆ ತಮ್ಮ ಕಚೇರಿಯಲ್ಲಿ ಪ್ರತ್ಯೇಕವಾಗಿ ಹೂವಿನ ಗೌರವ ಸಲ್ಲಿಸಿ ಎಂದು ಆದೇಶ ನೀಡಿದ್ದಾರೆ.