ಉತ್ತರ ಪ್ರದೇಶ: ಇಲ್ಲಿನ ಬಾಗಪತ್ ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂಟೆಸರ್ ಅಲಿ ಎಂಬುವರು ಗಡ್ಡ ಬೆಳಿಸಿರುವ ಕಾರಣದಿಂದಾಗಿ ಇಲಾಖೆಯಿಂದ ಅಮಾನತುಗೊಂಡಿದ್ದಾರೆ.
ಇಂಟೆಸರ್ ಅಲಿ ಕಳೆದ ಮೂರು ವರ್ಷಗಳಿಂದ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಗಡ್ಡ ತೆಗೆಯುವಂತೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸಹ ಗಡ್ಡ ತೆಗೆದಿರಲಿಲ್ಲವಂತೆ. ಒಂದೊಮ್ಮೆ ಗಡ್ಡ ಬೆಳೆಸುವ ಇಚ್ಛೆ ಹೊಂದಿದ್ದಲ್ಲಿ ಅದಕ್ಕೆ ಇಲಾಖೆಯ ಅನುಮತಿ ಅತ್ಯಗತ್ಯ. ಯಾವುದೇ ಅನುಮತಿ ಪಡೆಯದ ಕಾರಣ ಗಡ್ಡ ತೆಗೆಯವಂತೆ ಎಚ್ಚರಿಸಿದ್ದರೂ ಸಹ ಅಲಿ ಗಡ್ಡ ತೆಗೆಸಿರಲಿಲ್ಲವಂತೆ. ಹಾಗಾಗಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಬಗ್ಗೆ ಬಾಗಪತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಪ್ರತಿಕ್ರಿಯಿಸಿದ್ದು, ಪೊಲೀಸ್ ಕೈಪಿಡಿಯ ಪ್ರಕಾರ ಸಿಖ್ಖರಿಗೆ ಮಾತ್ರ ಗಡ್ಡವನ್ನು ಬೆಳೆಸಲು ಅವಕಾಶವಿದೆ. ಉಳಿದ ಎಲ್ಲಾ ಪೊಲೀಸರು ಸ್ವಚ್ಛವಾಗಿ ಗಡ್ಡವನ್ನು ತೆಗೆದಿರಬೇಕಾಗುತ್ತದೆ. ಯಾವುದೇ ಪೊಲೀಸ್ ಸಿಬ್ಬಂದಿ ಗಡ್ಡವನ್ನು ಬೆಳೆಸಲು ಅಥವಾ ಇಟ್ಟುಕೊಳ್ಳಲು ಬಯಸಿದರೆ ಅದಕ್ಕಾಗಿ ಅವರು ಅನುಮತಿ ಪಡೆಯಬೇಕು. ಇಂಟೆಸರ್ ಅಲಿಗೆ ಈಗಾಗಲೇ ಮೂರು ಬಾರಿ ಅನುಮತಿ ಪಡೆಯಲು ಸೂಚಿಸಲಾಗಿತ್ತು. ಆದರೆ ಅನುಸರಿಸದ ಕಾರಣ ಅಮಾನತುಗಳಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಇಂಟೆಸರ್ ಅಲಿ, ಗಡ್ಡ ಬೆಳೆಸಲು ಅನುಮತಿ ನೀಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.