ಉನ್ನಾವೊ (ಉತ್ತರ ಪ್ರದೇಶ): 2019ರ ಡಿಸೆಂಬರ್‌ನಲ್ಲಿ ಮೃತಪಟ್ಟ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಅತ್ಯಾಚಾರ ಸಂತ್ರಸ್ತೆಯ ಎಂಟು ವರ್ಷದ ಸೋದರಳಿಯ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಕುಟುಂಬ ಸದಸ್ಯರು ಆತ ನಾಪತ್ತೆಯಾದ ಬಳಿಕ ಪತ್ತೆಹಚ್ಚಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉನ್ನಾವೊ ಎಸ್ಪಿ ಆನಂದ್ ಕುಲಕರ್ಣಿ, ಎಎಸ್ಪಿ ವಿನೋದ್ ಕುಮಾರ್ ಪಾಂಡೆ ಮತ್ತು ಇತರ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಕುಟುಂಬದ ಹೇಳಿಕೆಯನ್ನು ದಾಖಲಿಸಿದ್ದಾರೆ.
"ಬಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕ ಕಾಣೆಯಾಗಿರುವ ಕುರಿತು ನಮಗೆ ಮಾಹಿತಿ ಬಂದಿದೆ. ಕುಟುಂಬವು ಐದು ಜನರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಎಫ್ಐರ್ನಲ್ಲಿ ಹೆಸರಿಸಲಾದ ಐದು ವ್ಯಕ್ತಿಗಳಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ" ಎಂದು ಎಸ್ಪಿ ಆನಂದ್ ಕುಲಕರ್ಣಿ ಹೇಳಿದ್ದಾರೆ.
ಒಂದೇ ಹಳ್ಳಿಯ ಐವರು ಸೇರಿ ಬಾಲಕನನ್ನು ಅಪಹರಿಸಿದ್ದಾರೆ ಎಂದು ಉನ್ನಾವೊ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಆರೋಪಿಸಿದ್ದಾರೆ. ಅತ್ಯಾಚಾರ ಎಸಗಿದ ಆರೋಪಿಗಳ ಕುಟುಂಬವೇ ಅಪಹರಣದಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ತಂಡಗಳನ್ನು ರಚಿಸಿ ನಾಪತ್ತೆಯಾದ ಬಾಲಕನನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಐವರು ಬೆಂಕಿ ಹಚ್ಚಿದ್ದರು. ವಿಮಾನದ ಮೂಲಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಗಿತ್ತಾದರೂ, ಆಕೆ ಮೃತಪಟ್ಟಿದ್ದಳು.
ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ರಾಯ್ ಬರೇಲಿಗೆ ಹೋಗುತ್ತಿದ್ದಾಗ ಉನ್ನಾವೊ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಆಕೆಯ ಇಬ್ಬರು ಅತ್ಯಾಚಾರಿಗಳು ಸೇರಿದಂತೆ ಐದು ಮಂದಿ ಬೆಂಕಿ ಹಚ್ಚಿದ್ದರು.