ಉನ್ನಾವೋ (ಉತ್ತರಪ್ರದೇಶ): ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಗುರುವಾರ ಭೀಕರ ಕೊಲೆ ಯತ್ನ ನಡೆದಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಐವರು ಆರೋಪಿಗಳು ಸಂತ್ರಸ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ್ದು, ಈ ಪಾತಕ ಕೃತ್ಯದಲ್ಲಿ ಸಂತ್ರಸ್ತೆಗೆ ಶೇ. 90ರಷ್ಟು ಸುಟ್ಟ ಗಾಯಗಳಾಗಿವೆ. ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಎನ್ಕೌಂಟರ್ ಮಾಡಿರುವ ಹಿನ್ನೆಲೆ ದೇಶದೆಲ್ಲೆಡೆ ಸಂತಸ ವ್ಯಕ್ತವಾಗಿದೆ. ಜೊತೆಗೆ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಈ ಪ್ರಕರಣದ ಆರೋಪಿಗಳನ್ನು ಸಹ ಎನ್ಕೌಂಟರ್ ಮಾಡಿ ಸಾಯಿಸಬೇಕು ಎಂದು ಸಂತ್ರಸ್ತೆ ತಂದೆ ಸೇರಿದಂತೆ ದೇಶದೆಲ್ಲೆಡೆ ಕೂಗೂ ಕೇಳಿ ಬರುತ್ತಿದೆ.
ಸಂತ್ರಸ್ತೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರಾವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಇಂದಿನ ಎಲ್ಲ ಬೆಳವಣಿಗೆಗಳ ಬಳಿಕ ಸಂತ್ರಸ್ತೆ ತಂದೆ ಈ ಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆ ಹಿನ್ನಲೆ:
ಇದೇ ಗುರುವಾರ ಬೆಳಗ್ಗೆ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಗೆ ಬೆಂಕಿ ಹಚ್ಚಿ ಕೊಲೆ ಯತ್ನಕ್ಕೆ ಮುಂದಾದ ಐವರಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ಇದೇ ಮಾರ್ಚ್ನಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿಗಳ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇತ್ತೀಚೆಗೆ ಈ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಸಂತ್ರಸ್ತೆ ತಮ್ಮ ಜಮೀನಿನಲ್ಲಿದ್ದಾಗ ದಾಳಿ ನಡೆಸಿದ ಆರೋಪಿಗಳು ಜೀವಂತವಾಗಿ ಸುಡುವ ಯತ್ನ ಮಾಡಿದ್ದರು.
ತಮ್ಮನ್ನು ಜೈಲಿಗೆ ಹೋಗುವಂತೆ ಮಾಡಿದ ಯುವತಿಯನ್ನು ಕೊಲ್ಲಬೇಕೆಂದು ನಿರ್ಧರಿಸಿ ಈ ಕೃತ್ಯ ಎಸಗಿದೆವು ಎಂದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಬೆಂಕಿ ಹಚ್ಚಿದ ಪರಿಣಾಮ ಸಂತ್ರಸ್ತೆಯ ದೇಹ ಸಂಪೂರ್ಣ ಸುಟ್ಟಿದೆ. ಸದ್ಯ ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೊದಲು ಪೊಲೀಸರೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ದೆಹಲಿಯ ಚಿಕಿತ್ಸೆ ಪಡೆಯುತ್ತಿದ್ದಾಳೆ.