ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಅನ್ಲಾಕ್ 1.0 ಜಾರಿಯಲ್ಲಿದೆ. ಇದು ಜೂನ್ 30ಕ್ಕೆ ಮುಕ್ತಾಯಗೊಳ್ಳಲಿರುವ ಕಾರಣ ಮತ್ತಷ್ಟು ಸಡಿಲಿಕೆವೊಂದಿಗೆ 2.0 ಅನ್ಲಾಕ್ ಜಾರಿಗೊಳ್ಳುವ ಲಕ್ಷಣ ಗೋಚರಿಸುತ್ತಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪ್ರಮುಖವಾಗಿ ನವದೆಹಲಿಯಿಂದ ನ್ಯೂಯಾರ್ಕ್, ಮುಂಬೈನಿಂದ ನ್ಯೂಯಾರ್ಕ್ ಸೇರಿದಂತೆ ಕೆಲವೊಂದು ಆಯ್ದ ದೇಶಗಳಿಗೆ ವಿಮಾನ ಪ್ರಯಾಣ ಆರಂಭಗೊಳ್ಳಬಹುದು.
ಗಲ್ಫ್ ರಾಷ್ಟ್ರಗಳಿಗೂ ಖಾಸಗಿ ವಿಮಾನಯಾನ ಆರಂಭಗೊಳ್ಳುವ ಸಾಧ್ಯತೆ ಇದೆ. ಆದರೆ ಶಿಕ್ಷಣ ಸಂಸ್ಥೆಗಳು, ಮೆಟ್ರೋ ಆರಂಭಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲವೊಂದು ರಾಜ್ಯಗಳು ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು, ಇದೀಗ ಕೇಂದ್ರ ಸರ್ಕಾರ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಿಗೂ ಗ್ರೀನ್ ಸಿಗ್ನಲ್ ನೀಡಬಹುದು ಎನ್ನಲಾಗಿದೆ.
ಜುಲೈ 18ರಂದು ಎಲ್ಲಾ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಮೋದಿ, ನಾವು ಕೊರೊನಾ ಜತೆ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್ಥಿಕತೆ ಉತ್ತೇಜನಕ್ಕಾಗಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದಿದ್ದರು. ಅದರಂತೆ ಜೂನ್ 30ರ ನಂತರ ಕೆಲವೊಂದು ಸಡಿಲಿಕೆ ಜಾರಿಗೊಳ್ಳುವುದು ಬಹುತೇಕ ಖಚಿತವಾಗಿದೆ.