ನವದೆಹಲಿ: ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಹಾಗೂ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ (74) ಗುರುವಾರ ವಿಧಿವಶರಾಗಿದ್ದಾರೆ.
ಪಾಸ್ವಾನ್ ಅವರದ್ದು, ಒಂದು ರೀತಿಯಲ್ಲಿ ಅದೃಷ್ಟದ ರಾಜಕಾರಣ. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಅಧಿಕಾರಿಕ್ಕೆ ಬಂದರೂ ಪಾಸ್ವಾನ್ ಆ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದರು. ದಿ.ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಸಚಿವರಾಗಿದ್ದ ಅವರು, 2004ರಲ್ಲಿ ಬಂದ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಸಚಿವರಾಗಿದ್ದರು. 2014ರ ಮೋದಿ ಸರ್ಕಾರದಲ್ಲೂ ಮಂತ್ರಿ ಸ್ಥಾನ ಪಡೆದ ಅದೃಷ್ಟದ ರಾಜಕಾರಣಿ. ಹೃದಯ ಸಂಬಂಧಿತ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.
ಬಾಲ್ಯ ಮತ್ತು ವೈಯಕ್ತಿಕ ಜೀವನ
ಪಾಸ್ವಾನ್ ಅವರು 1946ರಲ್ಲಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದರು. ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಮತ್ತು ಕಲಾ ವಿಭಾಗದಲ್ಲಿ ಪದವಿ ಪಡೆದರು. 1960ರಲ್ಲಿ ರಾಜಕುಮಾರಿ ದೇವಿ ಅವರನ್ನು ಮದುವೆಯಾದರು. ಆ ಬಳಿಕ 1981ರಲ್ಲಿ ವಿಚ್ಛೇದನ ನೀಡಿದರು. 1983ರಲ್ಲಿ ರೀನಾ ಶರ್ಮಾ ಅವರನ್ನು ಮದುವೆಯಾದರು. ಮೊದಲ ಹೆಂಡತಿಗೆ ಇಬ್ಬರು ಮಕ್ಕಳಿದ್ದು, ಎರಡನೇ ಪತ್ನಿಗೆ ಓರ್ವ ಪುತ್ರ ಚಿರಾಗ್ ಪಾಸ್ವಾನ್ ಇದ್ದು ಅವರು ರಾಜಕಾರಣಿಯಾಗಿದ್ದಾರೆ.
ಪೊಲೀಸ್ ಹುದ್ದೆ ತ್ಯಜಿಸಿದ್ದ ಪಾಸ್ವಾನ್
1986ರಲ್ಲಿ ಬಿಹಾರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಇದೇ ವೇಳೆ, ಶಹರ್ಬನಿ ಗ್ರಾಮದಲ್ಲಿ ವೈದ್ಯ ಚಿಕಿತ್ಸೆಗೆ 150 ರೂ. ಪಡೆದು ಮರಳಿಸದ ದಲಿತ ವ್ಯಕ್ತಿಯನ್ನು ಕಟ್ಟಿಹಾಕಿ ಪಂಚಾಯಿತಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಆ ವೇಳೆ, ವ್ಯಕ್ತಿಯನ್ನು ಬಿಡಿಸಿ, ಆರೋಪಕ್ಕೆ ಪುರಾವೆ ಆಗಿದ್ದ ಲೆಕ್ಕದ ಪುಸ್ತಕವನ್ನು ಹರಿದು ಹಾಕಿ ಆ ಗ್ರಾಮದ ಜನರ ಪಾಲಿನ ನಾಯಕ ಆದರು. ಆಗ ಅಲ್ಲಿ ನೆರದ ಜನ ಅವರನ್ನು ಚುನಾವಣೆ ನಿಲ್ಲುವಂತೆ ಪಟ್ಟು ಹಿಡಿದರು. ಪೊಲೀಸ್ ಅಧಿಕಾರಿ ಆಗಬೇಕಾದ ಪಾಸ್ವಾನ್ ರಾಜಕೀಯಕ ರಂಗ ಪ್ರವೇಶಿಸಿದರು. ಮುಂದೆ ನಡೆದದ್ದು ಇತಿಹಾಸ.
ರಾಜಕೀಯ ಏಳು - ಬಿಳು
ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿ ರಾಜಕೀಯ ಚದುರಂಗದ ಬದುಕು ಆರಂಭಿದಿ ಪಾಸ್ವಾನ್, 1969ರಲ್ಲಿ ಬಿಹಾರ ವಿಧಾನಸಭೆಯ ಅಲೋಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1970ರಲ್ಲಿ ಎಎಸ್‌ಪಿಯ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಆದರು. ಬಳಿಕ 1974ರಲ್ಲಿ ಹೊಸದಾಗಿ ರಚನೆಯಾದ ಲೋಕದಳ ಸೇರಿದರು. ಮುಂದೆ ನೋಡು ನೋಡುತ್ತಿಂದತೆ ಬಿಹಾರದ ದಲಿತರು, ಕೆಳವರ್ಗದ ಹಿಂದೂ ಮತ್ತು ಮುಸ್ಲಿಮರ ನಾಯಕನಾಗಿ ರಾಜ್ಯದಲ್ಲೇ ಬಹು ಎತ್ತರಕ್ಕೆ ಬೆಳೆದೆರು.
ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ವಿರುದ್ಧ ಸಿಡಿದೆದ್ದು, ಜೈಲು ಸೇರಿ ಬಿಡುಗಡೆ ಆದರು. 1977ರ ವರ್ಷವೇ ಜನತಾ ಪಕ್ಷದ ಸಂಸದರಾಗಿ ಹಾಜಿಪುರ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು.1984 ಮತ್ತು 2009ರ ಚುನಾವಣೆಯಲ್ಲಿ ಸೋಲು ಕಂಡರು. 2009ರಲ್ಲಿ ಬಿಹಾರ ಕ್ಷೇತ್ರದಿಂದ ರಾಜ್ಯಸಭೆಗೆ ಆಯ್ಕೆಯಾದರು.
ಒಂಬತ್ತು ಬಾರಿ ಸಂಸತ್ ಸದಸ್ಯ
1977, 1980, 1989, 1996, 1999, 2004, 2014 ಮತ್ತು 2019ರಲ್ಲಿ ಪಾಸ್ವಾನ್ ಅವರು ಲೋಕಸಭೆ ಆಯ್ಕೆಯಾದರು. ಒಂಬತ್ತು ಬಾರಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದರು. 1985ರಲ್ಲಿ ರಾಷ್ಟ್ರೀಯ ಲೋಕದಳದ ಪ್ರಧಾನ ಕಾರ್ಯದರ್ಶಿಯಾಗಿ, 1987ರಲ್ಲಿ ಜನತಾ ಪಾರ್ಟಿ ಜತೆ ಕೈಜೋಡಿಸಿದರು. ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಜನತಾ ಪಕ್ಷ ಜತೆ ಸೇರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. 2000ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಳಗ ಸೇರುವ ವಿಚಾರದಲ್ಲಿ ಜನತಾದಳ ಇಬ್ಭಾಗವಾಯಿತು. ಆಗ ಪಾಸ್ವಾನ್ ಮತ್ತು ಪಕ್ಷದ ಇತರ ಸದಸ್ಯರು ಜತೆಗೂಡಿ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಕಟ್ಟಿದರು. ಅಲ್ಲಿಂದ ಪಾಸ್ವಾನ್ ಪಕ್ಷದ ಅಧ್ಯಕ್ಷರಾದರು.
ಮೊದಲ ಬಾರಿಗೆ ಸಚಿವ ಸ್ಥಾನ
1989-90ರ ವಿಪಿ ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ಕಲ್ಯಾಣ ಸಚಿವರಾದರು. 1996-98ರಲ್ಲಿ ನ್ಯಾಷನಲ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾದರು. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ (1999-2001) ಸಂವಹನ ಸಚಿವರಾಗಿ ಮತ್ತು 2001-02ರಲ್ಲಿ ಕಲ್ಲಿದ್ದಲು ಹಾಗೂ ಗಣಿ ಖಾತೆ ವಹಿಸಿಕೊಂಡರು. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಜೊತೆ ಕೈಜೋಡಿಸಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಉಕ್ಕು ಖಾತೆ ನಿರ್ವಹಿಸಿದ್ದರು. 2019ರ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ-2 ಅವಧಿಯಲ್ಲಿ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.