ಮಾಯೆಮ್ (ಗೋವಾ): ಹೊಸದಾಗಿ ಜಾರಿಗೆ ಬಂದ ಕೃಷಿ ಕಾನೂನುಗಳ ವಿಚಾರದಲ್ಲಿ ರಾಜಕೀಯಕ್ಕೆ ಬಲಿಯಾಗಬೇಡಿ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ದೇಶದ ರೈತರಿಗೆ ಕೋರಿದ್ದಾರೆ.
ರೈತರಿಗೆ ಅರಿವು ಮೂಡಿಸುವ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಮಾತನಾಡಿರುವ ಜಾವಡೇಕರ್, 'ಸ್ವಾಮಿನಾಥನ್ ಆಯೋಗವು ರೈತರಿಗೆ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಮೂರು ಪಟ್ಟು ಪ್ರಸ್ತಾಪಿಸಿದೆ. ಆದರೆ ಕಾಂಗ್ರೆಸ್ ಪ್ರತಿ ಬಾರಿಯೂ ಈ ಪ್ರಸ್ತಾಪವನ್ನು ತಿರಸ್ಕರಿಸಿತು. ಪ್ರಧಾನಮಂತ್ರಿ ಜಾರಿಗೆ ತಂದ ಈ ಕಾನೂನುಗಳು ರೈತರಿಗೆ ಉತ್ತಮ ಆದಾಯವನ್ನು ಪಡೆಯಲು ಅನುವು ಮಾಡಿಕೊಡುತ್ತವೆ. ದಯವಿಟ್ಟು ಪ್ರತಿಪಕ್ಷಗಳ ಕಾರ್ಯತಂತ್ರಕ್ಕೆ ಬಲಿಯಾಗಬೇಡಿ. ಅವರು ರಾಜಕೀಯಕ್ಕಾಗಿ ಮಾತ್ರ ಈ ಕಾನೂನನ್ನು ವಿರೋಧಿಸುತ್ತಿದ್ದಾರೆ' ಎಂದಿದ್ದಾರೆ.
ಮೋದಿ ಸರ್ಕಾರದಿಂದ ರೈತರಿಗೆ ಕೃಷಿ ಕಾರ್ಡ್‌ಗಳು, ನೀರು ಸರಬರಾಜು ಮತ್ತು ಹೊಸ ಬ್ಯಾಂಕ್ ಖಾತೆಗಳು ದೊರೆತಿವೆ. ಪಂಜಾಬ್‌ನಲ್ಲಿ ಅಕಾಲಿ ದಳ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ನಡೆಸಿದ ಆಂದೋಲನವು ರಾಜಕೀಯಕ್ಕೆ ಮಾತ್ರ ಎಂದು ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (ಪಿಎಂ-ಕಿಸಾನ್ ಯೋಜನೆ) ಮತ್ತು ಇತರ ರೈತ ಕಲ್ಯಾಣ ಯೋಜನೆಗಳ ಅಡಿಯಲ್ಲಿ ತಮ್ಮ ಹೆಸರುಗಳು ಫಲಾನುಭವಿಳ ಪಟ್ಟಿಯಲ್ಲಿ ಇವೆಯೇ ಎಂದು ಪರಿಶೀಲಿಸಲು ಆಯಾ ವಲಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಾವಡೇಕರ್ ಕೋರಿದ್ದಾರೆ.