ನವದೆಹಲಿ: ಕೋವಿಡ್-19 ಚಿಕಿತ್ಸೆ ನೀಡದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ತರ್ಕಬದ್ಧ ಬಳಕೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೆಚ್ಚುವರಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೂಕ್ಷ್ಮ, ಮಧ್ಯಮ, ಕಡಿಮೆ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಪಿಪಿಇ ಬಳಸಬೇಕಾದ ಪ್ರಕಾರದ ಬಗ್ಗೆ ಸಚಿವಾಲಯ ಮಾರ್ಗಸೂಚಿ ನೀಡಿದೆ.
ಕೋವಿಡ್-19 ಚಿಕಿತ್ಸೆ ನೀಡದ ಆಸ್ಪತ್ರೆಯನ್ನು ಸಚಿವಾಲಯವು ವಿವಿಧ ವಿಭಾಗಗಳನ್ನು ಅಂದರೆ, ವೈಯಕ್ತಿಕ ಕೊಠಡಿಗಳನ್ನು, ಐಸಿಯು, ಲೇಬರ್ ಕೊಠಡಿ, ಆಪರೇಷನ್ ಥಿಯೇಟರ್‌ಗಳನ್ನು ಸೂಕ್ಷ್ಮ, ಮಧ್ಯಮ, ಕಡಿಮೆ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳೆಂದು ವಿಂಗಡಿಸಿದೆ.
ಲೇಬರ್ ಕೊಠಡಿಗಳಲ್ಲಿ ಟ್ರಿಪಲ್ ಲೇಯರ್ ಮೆಡಿಕಲ್ ಮಾಸ್ಕ್, ಫೇಸ್ ಶೀಲ್ಡ್, ಲ್ಯಾಟೆಕ್ಸ್ ಕೈಗವಸುಗಳು ಮತ್ತು ಕನ್ನಡಕಗಳನ್ನು ಬಳಸಲು ಸಚಿವಾಲಯ ಶಿಫಾರಸು ಮಾಡಿದೆ. ಸಿಬ್ಬಂದಿ ಮಾತ್ರವಲ್ಲದೇ ರೋಗಿಗಳು ಕೂಡ ಲೇಬರ್ ಕೋಣೆಗಳಲ್ಲಿ ಮುಖವಾಡಗಳನ್ನು ಧರಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ವಾರ್ಡ್‌ಗಳಲ್ಲಿ ಅಥವಾ ಐಸಿಯುನಲ್ಲಿ ಚಿಕಿತ್ಸೆ ನೀಡುವಾಗ ಟ್ರಿಪಲ್ ಲೇಯರ್ ಮೆಡಿಕಲ್ ಮಾಸ್ಕ್ ಮತ್ತು ಲ್ಯಾಟೆಕ್ಸ್ ಪರೀಕ್ಷೆಯ ಕೈಗವಸುಗಳನ್ನು ಧರಿಸಲು ಸಚಿವಾಲಯ ಶಿಫಾರಸು ಮಾಡಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಪಿಪಿಇಯ ಎಲ್ಲ ಘಟಕಗಳ ಬಳಕೆಯನ್ನು ಸಚಿವಾಲಯ ಶಿಫಾರಸು ಮಾಡಿದೆ.
ಇದಲ್ಲದೇ ಮಾರ್ಗಸೂಚಿಗಳ ಪ್ರಕಾರ, ಮಾದರಿ ಸಂಗ್ರಹಣೆ ಮತ್ತು ಸಾಗಣೆ ಹಾಗೂ ನಿತ್ಯದ ಮಾದರಿಗಳ ಪರೀಕ್ಷೆಗೆ ಬಳಸುವ ಪ್ರಯೋಗಾಲಯಗಳು, ರೇಡಿಯೊ ಡಯಾಗ್ನೋಸಿಸ್ ಮತ್ತು ಬ್ಲಡ್ ಬ್ಯಾಂಕ್ ಇತ್ಯಾದಿಗಳು ಸೂಕ್ಷ್ಮಅಪಾಯದ ವರ್ಗಕ್ಕೆ ಬರುತ್ತವೆ. ಆದರೆ, ಉಸಿರಾಟದ ಮಾದರಿಗಳನ್ನು ಸಂಗ್ರಹಿಸುವ ಮತ್ತು ಪರೀಕ್ಷಿಸುವ ಪ್ರಯೋಗಾಲಯಗಳು ಮಧ್ಯಮ-ಅಪಾಯದ ವಿಭಾಗದಲ್ಲಿ ಬರುತ್ತವೆ.
ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ಗಳು ಕಡಿಮೆ-ಅಪಾಯದ ವರ್ಗಕ್ಕೆ ಬರುತ್ತವೆ. ಆದರೆ, ತೀವ್ರವಾದ ಉಸಿರಾಟದ ಸಮಸ್ಯೆಯಿರುವ ರೋಗಿಗಳನ್ನು ಹೊತ್ತು ತರುವ ತುರ್ತು ವಾಹನಗಳು ಹೆಚ್ಚಿನ ಅಪಾಯದ ವರ್ಗಕ್ಕೆ ಬರುತ್ತವೆ.
ಎಲ್ಲ ಸಮಯದಲ್ಲೂ ಪ್ರಮಾಣಿತ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಮತ್ತು ಪಿಪಿಇಗಳು ಮೂಲಭೂತ ತಡೆಗಟ್ಟುವ ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಪರ್ಯಾಯವಲ್ಲ ಎಂದು ಮಾರ್ಗಸೂಚಿಗಳು ತಿಳಿಸಿವೆ.