ಹೈದರಾಬಾದ್: ಕೊರೊನಾದಿಂದಾಗಿ ದೇಶದಲ್ಲಿ ಈವರೆಗೆ 2 ಸಾವು ಸಂಭವಿಸಿವೆ. ಈ ನಡುವೆ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿವೆ.
ಆದರೆ ಈಗ ಕೊರೊನಾದಿಂದ ಹೊಸ ಸಮಸ್ಯೆ ಹಾಗೂ ಸವಾಲೊಂದು ಹುಟ್ಟಿಕೊಂಡಿದೆ. ವೈರಸ್ನಿಂದ ಸತ್ತವರ ಶವಗಳನ್ನು ಏನು ಮಾಡುತ್ತಾರೆ? ಆ ಶವಗಳ ಅಂತ್ಯಸಂಸ್ಕಾರ ಹೇಗೆ ನಡೆಸಬೇಕು? ಈ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ.
ಮೃತದೇಹದಿಂದ ಕೊರೊನಾ ವೈರಸ್ ಹರಡಲು ಸಾಧ್ಯವೇ? ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
"ಕೊರೊನಾ ವೈರಸ್ ಉಸಿರಾಟ ಸಂಬಂಧಿ ಕಾಯಿಲೆಯಾಗಿದೆ. ಇದು ಸೂಕ್ಷ್ಮಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಆದರೆ ಸೋಂಕಿತ ಮೃತದೇಹಗಳಿಂದ ವೈರಸ್ ಹರಡುವ ಸಾಧ್ಯತೆ ತುಂಬಾ ಕಡಿಮೆ. ಎಬೋಲಾ ಹಾಗೂ ನಿಫಾ ವೈರಸ್ ಪ್ರಕರಣಗಳಲ್ಲಿ ಮೃತದೇಹಗಳಿಂದ ನೇರವಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿದೆ ಎಚ್ಚರಿಕೆ ಕ್ರಮಗಳು:
- ವಿಶ್ವ ಆರೋಗ್ಯ ಸಂಸ್ಥೆ(WHO)ಯು ಉಸಿರಾಟ, ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
- ಸೋಂಕಿತ ಮೃತದೇಹಗಳನ್ನು ಪ್ರತ್ಯೇಕ ಕೊಠಡಿಯಲ್ಲಿಡಬೇಕು.
- ಒಂದು ಪ್ರದೇಶದಿಂದ ಮತ್ತೊಂದೆಡೆ ಶಿಫ್ಟ್ ಮಾಡುವಾಗ ಹೆಚ್ಚು ಕಾಳಜಿ ವಹಿಸಬೇಕು.
- ಮೃತದೇಹಗಳನ್ನು ಶಿಫ್ಟ್ ಮಾಡುವಾಗ ಉದ್ದನೆಯ ತೋಳಿನ ನಿಲುವಂಗಿಗಳನ್ನು ಧರಿಸಬೇಕು. ಅದು ಜಲನಿರೋಧಕವಾಗಿದ್ದರೆ ಇನ್ನೂ ಉತ್ತಮ.
- ಮೃತದೇಹವನ್ನು ನೇರವಾಗಿ ಮುಟ್ಟದೆ, ನಿರ್ದಿಷ್ಟ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಬೇಕು.
- ಮೃತದೇಹವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಿ ಶವಾಗಾರಕ್ಕೆ ಸ್ಥಳಾಂತರಿಸಬೇಕು.
- ಮುಖ ಸೇರಿದಂತೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸಿ.
- ಸ್ಮಶಾನದ ಸಿಬ್ಬಂದಿ ಕೂಡಾ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮುಖ ಸೇರಿದಂತೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸಬೇಕು.