ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮೇ 22 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇ 22 ರಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸಭೆ ನಡೆಯಲಿದೆ. ಈ ಕಾರ್ಯಕಾರಿ ಮಂಡಳಿಗೆ 34 ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಪ್ರಾದೇಶಿಕ ಗುಂಪುಗಳ ನಡುವೆ ಪ್ರತೀ ಒಂದು ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಿರುತ್ತಾರೆ.
ಆರೋಗ್ಯ ಸಭೆಯ ನಿರ್ಧಾರಗಳು ಮತ್ತು ನೀತಿಗಳನ್ನು ಕಾರ್ಯಗತಗೊಳಿಸುವುದು ಮತ್ತು ಅದರ ಕಾರ್ಯಗಳಿಗೆ ನೆರವಾಗುವುದು ಮಂಡಳಿಯ ಮುಖ್ಯ ಕಾರ್ಯವಾಗಿದೆ. ಸೋಮವಾರ ನಡೆದ 73ನೇ ವಿಶ್ವ ಆರೋಗ್ಯ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಈ ವೇಳೆ ಕೊರೊನಾ ಸೊಂಕಿನಿಂದಾಗಿ ವಿಶ್ವದಾದ್ಯಂತ ಸಾಕಷ್ಟು ಜನರು ಸಾವಿಗೀಡಾದ ಬಗ್ಗೆ ಆರೋಗ್ಯ ಸಚಿವರು ಸಂತಾಪ ವ್ಯಕ್ತಪಡಿಸಿದ್ದರು. ಕೊರೊನಾ ವಿರುದ್ಧದ ಯುದ್ಧದಲ್ಲಿ ಮುಂಚೂಣಿ ಹೋರಾಟ ನಡೆಸುತ್ತಿರುವವರಿಗೆ ಹರ್ಷವರ್ಧನ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ಸೋಂಕಿನ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿಕ್ರಿಯೆ ಬಗ್ಗೆ ಸ್ವತಂತ್ರ ತನಿಖೆ ನಡೆಸಲು 73ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ (WHA) ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.