ಹೈದರಾಬಾದ್: ಜಾಗತಿಕ ಪಿಡುಗಾಗಿ ಕಾಡುತ್ತಿರುವ ಕೋವಿಡ್ – 19 ರೀತಿಯ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಿನ (ಝೂನೋಟಿಕ್ಸ್) ಭೀತಿಯನ್ನು ಶಮನ ಮಾಡಲು ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ಅಪಾಯವನ್ನು ತಗ್ಗಿಸಲು ಪರಿಸರ ಸಂರಕ್ಷಣೆ ಕಾರ್ಯಕ್ಕೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಮುಂದಾಗಿದೆ.
ಕೋವಿಡ್ - 19ಗೆ ಪ್ರತಿಕ್ರಿಯೆ ರೂಪದಲ್ಲಿ ‘ವರ್ಕಿಂಗ್ ವಿತ್ ದ ಎನ್ವಿರಾನ್ಮೆಂಟ್ ಟು ಪ್ರೊಟೆಕ್ಟ್ ಪೀಪಲ್ ‘ ಎಂಬ ಯೋಜನೆಗೆ ಯುಎನ್‌ಇಪಿ ಇಂದು ಚಾಲನೆ ನೀಡಿದೆ. ಬಲಿಷ್ಠ ವಿಜ್ಞಾನ, ಆರೋಗ್ಯಪೂರ್ಣ ಭೂಮಿಗೆ ಪೂರಕವಾದ ನೀತಿಗಳು ಹಾಗೂ ಹಸಿರು ಬಂಡವಾಳದ ಮೂಲಕ “ ಬ್ಯುಲ್ಡ್ ಬ್ಯಾಕ್ ಬೆಟರ್ “ ( ಮರಳಿ ಒಳ್ಳೆಯದನ್ನು ಕಟ್ಟು ) ಎಂಬ ಧ್ಯೇಯಮಂತ್ರದೊಂದಿಗೆ ತನಗೆ ಬೆಂಬಲ ನೀಡುವ ರಾಷ್ಟ್ರಗಳು ಮತ್ತು ಸದಸ್ಯ ದೇಶಗಳ ಜೊತೆಗೂಡಿ ಈ ಯೋಜನೆಯನ್ನು ಅದು ಕೈಗೆತ್ತಿಕೊಂಡಿದೆ. ಯುಎನ್‌ಇಪಿಯ ಈ ಯೋಜನೆ ನಾಲ್ಕು ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ. ಕೋವಿಡ್ – 19 ತ್ಯಾಜ್ಯವನ್ನು ನಿರ್ವಹಿಸಲು ರಾಷ್ಟ್ರಗಳಿಗೆ ಸಹಾಯ ಮಾಡುವುದು, ಪ್ರಕೃತಿ ಮತ್ತು ಜನರಲ್ಲಿ ಸುಧಾರಣಾತ್ಮಕ ಬದಲಾವಣೆ ತರುವುದು, ಭವಿಷ್ಯದಲ್ಲಿ ಬಿಕ್ಕಟ್ಟುಗಳು ಎದುರಾದಾಗ ಸಮತೋಲನ ಕಾಪಾಡಿಕೊಳ್ಳುವ ರೀತಿಯ ಆರ್ಥಿಕ ಚೇತರಿಕೆ ಪ್ಯಾಕೇಜ್ ಗಳನ್ನು ರೂಪಿಸುವುದು ಹಾಗೂ ಪರಿಸರ ಆಧಾರಿತ ಜಾಗತಿಕ ಆಡಳಿತಕ್ಕೆ ಆಧುನಿಕ ಸ್ಪರ್ಶ ನೀಡುವುದು ಅದರ ಉದ್ದೇಶ.
“ಕೋವಿಡ್ – 19 ಸಂದರ್ಭದಲ್ಲಿ ಮನುಕುಲ ಬದಲಾಗಬೇಕು ಎಂಬ ಪ್ರಬಲ ಎಚ್ಚರಿಕೆಯನ್ನು ಭೂಗ್ರಹ ನೀಡಿದೆ ”ಎಂದು ಯುಎನ್‌ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್ ಹೇಳಿದ್ದಾರೆ. " ಆರ್ಥಿಕತೆ ಸ್ಥಗಿತಗೊಂಡಿರುವುದು ಈ ಎಚ್ಚರಿಕೆಯ ಸಣ್ಣ ಭಾಗವಾಗಿ ತೋರುತ್ತಿದೆ. ಇದು ಸಹಿಸಲು ಅಸಾಧ್ಯ. ಪ್ರಪಂಚದ ಎಲ್ಲ ದೇಶಗಳು ಅಭಿವೃದ್ಧಿ ಹೊಂದಬೇಕು ಎನ್ನುವುದಾದರೆ ಪ್ರಕೃತಿಗೆ ಪೂರಕವಾದ ಆರ್ಥಿಕತೆಯನ್ನು ರೂಪಿಸುವುದು ನಿರ್ಣಾಯಕ ಎನಿಸಿಕೊಂಡಿದೆ. ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ – 19 ಸೃಷ್ಟಿಸಿರುವ ದಿಗ್ಭಂಧನದಿಂದಾಗಿ ಜಾಗತಿಕ ವಾಯು ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಉಂಟಾಗಿದೆ ಎನ್ನುತ್ತವೆ ಅಧ್ಯಯನಗಳು. ಕೋವಿಡ್ – 19ನಿಂದ ಉಂಟಾಗಿರುವ ಸಾಮಾಜಿಕ - ಆರ್ಥಿಕ ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ಎದುರಿಸುವ ಯತ್ನದಲ್ಲಿ ತೊಡಗಿರುವ ರಾಷ್ಟ್ರಗಳಿಗೆ ಬೆಂಬಲ ನೀಡಲು, ಯುಎನ್ಇಪಿ ಮುಂದಾಗಿದೆ. ಈ ದಿಸೆಯಲ್ಲಿ ವಿಶ್ವಸಂಸ್ಥೆಯ ಉಳಿದ ಅಂಗಗಳೊಂದಿಗೆ ಸೇರಿ ಸಂಯೋಜನಾತ್ಮಕ ರೀತಿಯಲ್ಲಿ ಅದು ದುಡಿಯುತ್ತದೆ.
ಸಂಸ್ಥೆ ತೆಗೆದುಕೊಂಡ ಕೆಲವು ಕ್ರಮಗಳು ಹೀಗಿವೆ :
ಮಾನವನ ಆರೋಗ್ಯ ಅಥವಾ ಪರಿಸರಕ್ಕೆ ಮತ್ತಷ್ಟು ಹಾನಿಯಾಗಬಾರದು ಎಂಬ ಉದ್ದೇಶದಿಂದ ಅಪಾಯಕಾರಿ ತ್ಯಾಜ್ಯದ ಹೆಚ್ಚಳ ನಿಯಂತ್ರಿಸಲು ಮುಂದಾಗುವ ದೇಶಗಳಿಗೆ ಬೆಂಬಲ ನೀಡುವುದು. ಪ್ರಕೃತಿಗೆ ಪೂರಕವಾದ ವಿಧಾನಗಳ ಮೂಲಕ ಪ್ರಾಣಿಜನ್ಯ ಸೋಂಕಿನ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ವಿವಿಧ ದೇಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಪ್ರಕೃತಿ ಮತ್ತು ಸುಸ್ಥಿರತೆಗೆ ಅನುಗುಣವಾಗಿ ಹೂಡಿಕೆ ಮಾಡಲು ವಿಸ್ತೃತ ಅವಕಾಶಗಳನ್ನು ಕಲ್ಪಿಸುವುದು. ಮರು ನಿರ್ಮಾಣ, ವಿಸ್ತರಣೆ, ಸುಸ್ಥಿರ ಬಳಕೆ ಮತ್ತು ಉತ್ಪಾದನೆಯ ವೇಗವೃದ್ಧಿಗಾಗಿ ಮತ್ತು ಹೊಸ ಹಸಿರು ಉದ್ಯೋಗ ( ಕೃಷಿ ಮತ್ತಿತರ ಪರಿಸರಕ್ಕೆ ಪೂರಕವಾದ ವೃತ್ತಿ ) ಸೃಷ್ಟಿಗಾಗಿ ಹಣಕಾಸು ಕ್ಷೇತ್ರದ ನೈಜ ಆಟಗಾರರಿಗೆ ಪ್ರೇರಣೆ ನೀಡುವುದು. ಪರಿಸರ ಆಡಳಿತ ಮತ್ತು ಪರಿಸರಕ್ಕೆ ಹೆಚ್ಚು ಮಾರಕ ಆಗದ ರೀತಿಯಲ್ಲಿ ವಿವಿಧ ದೇಶಗಳನ್ನು ವಾಸ್ತವದ ಕಡೆ ಹೆಜ್ಜೆ ಹಾಕುವಂತೆ ಮಾಡುವ ನಿಟ್ಟಿನಲ್ಲಿ ಪರಿಶೀಲಿಸುವುದು ಮತ್ತು ಇದಕ್ಕೆ ಪೂರಕವಾಗಿ ಚರ್ಚೆ ನಡೆಸುವುದು.
"ಅಭಿವೃದ್ಧಿ ಹೊಂದುತ್ತಿರುವ ನೈಸರ್ಗಿಕ ಜಗತ್ತು ಮಾನವನ ಆರೋಗ್ಯಕ್ಕೆ, ಸಮಾಜಗಳಿಗೆ, ಆರ್ಥಿಕತೆಗಳಿಗೆ ಅವಶ್ಯಕವಾಗಿದ್ದು ಯುಎನ್ಇಪಿ ಇದರತ್ತ ಚಿತ್ತ ನೆಟ್ಟಿದೆ “ ಎಂದಿದ್ದಾರೆ ಆಂಡರ್ಸನ್. " ಆದರೆ ಈಗ ನಶಿಸಿ ಹೋದ ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯತೆಯನ್ನು ಮರು ಸ್ಥಾಪಿಸುವ ಮೂಲಕ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ ನಡೆಸುವ ಮತ್ತು ಮಾಲಿನ್ಯ ಕಡಿಮೆ ಮಾಡುವ ಮೂಲಕ ಭವಿಷ್ಯದ ಸಾಂಕ್ರಾಮಿಕ ರೋಗಗಳ ಅಪಾಯ ತಗ್ಗಿಸಲು ಮುಂದಾಗುವ ದೇಶಗಳಿಗೆ ಯುಎನ್‌ಇಪಿ ಇನ್ನೂ ಹೆಚ್ಚಿನ ಬೆಂಬಲ ನೀಡಬೇಕಿದೆ." ಎಂದು ಅವರು ಒತ್ತಿ ಹೇಳಿದ್ದಾರೆ.