ಲಕ್ನೋ: ನಿರುದ್ಯೋಗ ಸಮಸ್ಯೆ ರಾಜಕೀಯ ವಿಷಯವಲ್ಲ, ಅದು ಮಾನವೀಯ ಸಮಸ್ಯೆಯಾಗಿದೆ. ಈ ವಿಷಯದಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಹಾಯವನ್ನು ಮಾಡುವುದಾಗಿ ಕಾಂಗ್ರೆಸ್ನ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಮತ್ತು ಬೋಧನಾ ಹುದ್ದೆಗೆ ಪರೀಕ್ಷೆಯನ್ನು ಬರೆದರೂ ಕೆಲಸವಿಲ್ಲದೇ ಇರುವ ಸುಮಾರು 50 ಯುವಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಯುವಕರ ಕೂಗನ್ನು ಆಲಿಸುತ್ತದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಕಟಣೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, "ನಾವು ಈ ವಿಷಯವಾಗಿ ರಸ್ತೆಗಿಳಿದು, ಶಾಸಕಾಂಗದವರೆಗೆ ಹೋರಾಡಲು ಸಿದ್ಧ. ಕಾಂಗ್ರೆಸ್ ಈ ಬಗ್ಗೆ ಹಿಂದೆ ಸರಿಯುವುದಿಲ್ಲ. ಇದು ನಮಗೆ ರಾಜಕೀಯ ವಿಷಯವಲ್ಲ, ಮಾನವೀಯ ವಿಷಯವಾಗಿದೆ. ಇದು ನ್ಯಾಯದ ಪ್ರಶ್ನೆಯಾಗಿದೆ." ಎಂದರು. ಈ ವಿಷಯದಲ್ಲಿ ತಮ್ಮ ಪಕ್ಷವು ಎಲ್ಲ ರೀತಿಯ ಸಹಾಯವನ್ನು ನೀಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯುವಕರಿಗೆ ಭರವಸೆ ನೀಡಿದರು.
ಒಂದೂವರೆ ಗಂಟೆಗಳ ಕಾಲ ನಡೆದ ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ 50ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ಕನ್ವೀನರ್ ಲಾಲನ್ ಕುಮಾರ್ ಹೇಳಿದ್ದಾರೆ. ಈ ಘಟನೆಯು ನಿರುದ್ಯೋಗ ಕುರಿತ ಸಂವಾದದ ಒಂದು ಭಾಗವಾಗಿದೆ.