ಮುಜಾಫರ್ನಗರ (ಉತ್ತರ ಪ್ರದೇಶ): ಇಲ್ಲಿನ ಶಾಮ್ಲಿ ಜಿಲ್ಲೆಯ ಅಸರ್‌ಪುರ ಗ್ರಾಮದಲ್ಲಿ ಜರುಗಿದ ಹೋಳಿ ಸಂಭ್ರಮಾಚರಣೆ ಸಂದರ್ಭದಲ್ಲಿ ಗುಂಡು ಹಾರಿಸಿದ್ದ ವಿಡಿಯೋ ವೈರಲ್ ಆಗಿದ್ದ ಬೆನ್ನಿಗೇ ಕೃತ್ಯ ಎಸಗಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿ ಸುಮಿತ್ ಚೌಹಾಣ್ ಮತ್ತು ಆತನ ಸ್ನೇಹಿತ ಸುರೇಶ್ ಬಂಧಿತರು. ಜಿಂಜಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ ಎಂದು ಶಾಮ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
ಈ ಇಬ್ಬರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಗುಂಡು ಹಾರಿಸಿದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು. ವಿಡಿಯೋದಲ್ಲಿ ಸುಮಿತ್ ಗುಂಡು ಹಾರಿಸಿದ್ದಾನೆ. ಸ್ನೇಹಿತ ಸುರೇಶ್ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ.