ಲಕ್ನೋ: ಉತ್ತರ ಪ್ರದೇಶಕ್ಕೆ ನೂರಾರು ವಲಸೆ ಕಾರ್ಮಿಕರನ್ನು ಕರೆ ತರುವ ಶ್ರಮಿಕ್ ರೈಲುಗಳಲ್ಲಿ ಇಬ್ಬರು ಮಹಿಳಾ ವಲಸೆ ಕಾರ್ಮಿಕರು ಪ್ರತ್ಯೇಕ ಟ್ರೇನ್ಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಮೊದಲ ಘಟನೆಯಲ್ಲಿ ಬಿಹಾರಕ್ಕೆ ತೆರಳುವ ಜಮ್ನಗರ-ಮುಜಾಫರ್ಪುರ ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗ್ರಾ ಕೋಟೆ ನಿಲ್ದಾಣ ತಲುಪಿದ ಕೂಡಲೇ ವೈದ್ಯರೊಬ್ಬರು ಮತ್ತು ರೈಲ್ವೆ ಸಿಬ್ಬಂದಿ ತಂಡವು ವಲಸೆ ಕಾರ್ಮಿಕರಾದ ಬಿಹಾರದ ಚಪ್ರಾ ಜಿಲ್ಲೆಯ ಮನೋಹರ್‌ಪುರ ಗ್ರಾಮದ ಮಮತಾ ಯಾದವ್ ಅವರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು. ಹೆಣ್ಣು ಮಗು ಮತ್ತು ತಾಯಿ ಇಬ್ಬರೂ ಆರೋಗ್ಯ ಮತ್ತು ಸುರಕ್ಷಿತರಾಗಿದ್ದಾರೆ. ಅವರಿಗೆ ರೈಲಿನಲ್ಲಿ ಪ್ರಯಾಣ ಮುಂದುವರೆಸಲು ಅವಕಾಶ ನೀಡಲಾಯಿತು ಎಂದು ಆಗ್ರಾ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎಸ್.ಕೆ.ಶ್ರೀವಾಸ್ತವ್ ತಿಳಿಸಿದ್ಧಾರೆ.
ಅಂಬೇಡ್ಕರ್ ನಗರ ಜಿಲ್ಲೆಗೆ ತೆರಳುತ್ತಿದ್ದ ಮತ್ತೊಂದು ಶ್ರಮಿಕ್ ರೈಲಿನಲ್ಲಿ ಸುಬದ್ರಾ ಎಂಬ 30 ವರ್ಷದ ವಲಸೆ ಕಾರ್ಮಿಕ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಂಬೇಡ್ಕರ್ ನಗರದಲ್ಲಿರುವ ತಮ್ಮ ಮನೆಗೆ ಮರಳಲು ಸುಭದ್ರಾ ಮತ್ತು ಅವರ ಪತಿ ದುರ್ಗೇಶ್ ಜಲಂಧರ್ನಲ್ಲಿ ರೈಲು ಹತ್ತಿದ್ದರು. ಶ್ರಮಿಕ್ ವಿಶೇಷ ರೈಲಿನಲ್ಲಿ ನಿಯೋಜಿಸಲಾಗಿರುವ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಸುಬದ್ರಾ ಹೆರಿಗೆಗೆ ಸಹಾಯ ಮಾಡಿದೆ. ರೈಲು ಮೊರಾದಾಬಾದ್‌ಗೆ ಬರುವ ಮುನ್ನವೇ ಇವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೊರಾದಾಬಾದ್ ವಿಭಾಗದ ಉತ್ತರ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (ಎಸ್‌ಡಿಸಿಎಂ) ರೇಖಾ ಶರ್ಮಾ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬಿಟ್ಟಿರುವ ವಿಶೇಷ ಶ್ರಮಿಕ್ ರೈಲುಗಳ ಮೂಲಕ ಸಾವಿರಾರು ವಲಸೆ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರದ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ.