ಭುವನೇಶ್ವರ್ (ಒಡಿಶಾ): ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ನಕ್ಸಲರನ್ನು ಬೇಟೆಯಾಡಿರುವ ಇಬ್ಬರು ಭದ್ರತಾ ಸಿಬ್ಬಂದಿ ಬಳಿಕ ಹುತಾತ್ಮರಾಗಿದ್ದಾರೆ.
ಕಾಲಾಹಂಡಿ ಜಿಲ್ಲೆಯ ಕಂಧಮಾಲ್ ಗಡಿಯ ಭಂಡರಂಗಿ ಸಿರ್ಕಿ ಅರಣ್ಯ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಹಾಗೂ ನಕ್ಸಲರ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಡಿಶಾ ರಾಜ್ಯ ಪೊಲೀಸ್ನ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಯೂರ್ಭಂಜ್ ಜಿಲ್ಲೆಯ ಸುಧೀರ್ ಕುಮಾರ್ ತುಡು (28), ಅಂಗುಲ್ ಜಿಲ್ಲೆಯ ದೇಬಾಸಿಸ್ ಸೇಥಿ (27) ಹುತಾತ್ಮರಾದ ಯೋಧರಾಗಿದ್ದಾರೆ. ಓರ್ವ ಯೋಧ ಗಾಯಗಳಿಂದಾಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಮತ್ತೋರ್ವ ಯೋಧ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದಾನೆ.
ಮೃತಪಟ್ಟ ಐವರು ನಕ್ಸಲರಲ್ಲಿ ನಾಲ್ಕು ಮಂದಿ ಮಹಿಳೆಯರಾಗಿದ್ದಾರೆ. ಅವರೆಲ್ಲರೂ ಬನ್ಸಧಾರಾ-ಘುಮ್ಸಾರ್-ನಾಗಬಲಿ ವಿಭಾಗಕ್ಕೆ ಸೇರಿದವರಾಗಿದ್ದು, ನಿಷೇಧಿಸಲ್ಪಟ್ಟ ಸಿಪಿಐಎಂ ಪಕ್ಷದ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ 6 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಲಾಹಂಡಿಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಗಂಗಾಧರ ಮಾಹಿತಿ ನೀಡಿದ್ದಾರೆ.
ಕಾಲಾಹಂಡಿಯಲ್ಲಿ ಮಾವೋವಾದಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆ ಹಾಗೂ ಜಿಲ್ಲಾ ಸ್ವಯಂ ಪಡೆ ( District Voluntary Force) ಜಂಟಿಯಾಗಿ ಕಾರ್ಯಾಚರಣೆ ಕೈಗೆತ್ತಿಕೊಂಡಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಬುಧವಾರ ಬೆಳಗ್ಗೆ 11 ಗಂಟೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.