ಜೋರ್ಹತ್(ಅಸ್ಸೋಂ): ನಗರದ ಎಟಿ ರಸ್ತೆಯಲ್ಲಿರುವ ಆಟೋಮೊಬೈಲ್ ಶಾಪ್ವೊಂದರಲ್ಲಿ ನಿನ್ನೆ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ಮಧ್ಯರಾತ್ರಿ ಆಟೋಮೊಬೈಲ್ ಮಳಿಗೆಗೆ ಬೆಂಕಿ ತಗುಲಿದ್ದು, ಈ ಅನಾಹುತದಿಂದಾಗಿ ಇಬ್ಬರು ಮೃತಪಟ್ಟಿದ್ದರೆ, ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬೆಂಕಿ ಅನಾಹುತದಿಂದ ಅಂಗಡಿ ಸಮೀಪವಿದ್ದ ನಾಲ್ಕು ಮನೆಗಳಿಗೂ ಸಹ ಬೆಂಕಿ ಆವರಿಸಿಕೊಂಡಿದ್ದು, ಮಧ್ಯರಾತ್ರಿ 1.30ರ ಸುಮಾರಿಗೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಆಟೋಮೊಬೈಲ್ ಅಂಗಡಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ಅಸ್ಸೋಂ ವಿಧಾನಸಭೆಯ ಸ್ಪೀಕರ್ ಮತ್ತು ಜೋರ್ಹತ್ ಶಾಸಕ ಹಿತೇಂದ್ರ ನಾಥ್ ಗೋಸ್ವಾಮಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಜಿಲ್ಲೆಯಲ್ಲಿನ ಅಗ್ನಿಶಾಮಕ ದಳದ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು ಎಂದು ಗೋಸ್ವಾಮಿ ಹೇಳಿದ್ದಾರೆ.
ಈ ಹಿಂದೆ, ಜೋರ್ಹತ್‌ನ ಬಲಿಬತ್ ಎಂಬ ಪ್ರದೇಶದಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿತ್ತು. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಆಚರಣೆ ನಿಮಿತ್ತ ಪಟಾಕಿ ಸಿಡಿಸಿರುವುದು ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.