ಚೆನ್ನೈ: ಫ್ರಿಡ್ಜ್ ಸ್ಪೋಟಗೊಂಡ ಪರಿಣಾಮ ಹೊಗೆಯಿಂದ ಉಸಿರುಗಟ್ಟಿ ಪತ್ರಕರ್ತ , ಆತನ ತಾಯಿ ಹಾಗೂ ಪತ್ನಿ ದಾರುಣವಾಗಿ ಸಾವಿಗೀಡಾದ ಘಟನೆ ತಮಿಳುನಾಡಿನಲ್ಲಿ ಇಂದು ನಡೆದಿದೆ.
ತಂಬರಂನ ಸೆಲೈಯೂರ್ ನಿವಾಸಿ ಪ್ರಸನ್ನ (36) , ಆತನ ಪತ್ನಿ ಅರ್ಚನಾ (30) ಹಾಗೂ ಆತನ ತಾಯಿ ರೇವತಿ (59) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪ್ರಸನ್ನ ತಮಿಳಿನ ನ್ಯೂಸ್ -ಜೆಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಪತ್ನಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು.
ಮೂಲಗಳಂತೆ, ಇಂದು ಬೆಳಗ್ಗೆ ಹೈ ವೋಲ್ಟೇಜ್ನಿಂದ ಫ್ರಿಡ್ಜ್ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮನೆಯಲ್ಲಿ ದಟ್ಟ ಹೊಗೆ ಆವರಿಸಿದೆ. ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿದ್ದರಿಂದ ಹೊಗೆ ಹೊರಗೆ ಹೋಗಿಲ್ಲ. ಅತಿಯಾದ ಹೊಗೆಯಿಂದಾಗಿ ಮನೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮನೆಯ ಕೆಲಸದಾಕೆ ಬೆಳಗ್ಗೆ ಬಂದಾಗ ಮನೆಯ ಬಾಗಿಲು ತೆರೆದಿರಲಿಲ್ಲ. ಕೆಲ ಸಮಯದ ನಂತರ ನೆರೆ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಮೂವರು ಮೃತಪಟ್ಟಿದ್ದರು.
ಘಟನೆ ಸಂಬಂಧ ಸೆಲೈಯೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರ ಸಾವಿಗೆ ನಿಜವಾದ ಕಾರಣವೇನೆಂಬ ತನಿಖೆ ನಡೆಯುತ್ತಿದೆ.