ತಿರುಮಲ: ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಹತ್ವದ ವಿಷಯಗಳು ಮಾಧ್ಯಮಗಳಲ್ಲಿ ಸೋರಿಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಎಸ್ಟೇಟ್ ಅಧಿಕಾರಿಯೊಬ್ಬರನ್ನ ಅಮಾನತು ಮಾಡಲಾಗಿದೆ.
ವಿ.ದೇವೇಂದ್ರ ರೆಡ್ಡಿ ಡಿಸಿ ಕೇಡರ್ನ ಅಧಿಕಾರಿ ಆಗಿದ್ದು, ಕಳೆದ ಆರು ತಿಂಗಳಿಂದ ದೇವಸ್ಥಾನದ ಎಸ್ಟೇಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಡೆಪ್ಯೂಟೇಷನ್ ಮೇಲೆ ಇಲ್ಲಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಮಹತ್ವದ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಆದ ಹಿನ್ನೆಲೆ ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಗಾಲ್ ತನಿಖೆ ನಡೆಸಿ, ರೆಡ್ಡಿ ಅವರನ್ನ ಅಮಾನತುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಶಿಫಾರಸಿನ ಮೇಲೆ ಅಧಿಕಾರಿಯನ್ನು ಅಮಾನತು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ವೆಂಕಟೇಶ್ವರ ಸ್ವಾಮಿಯ ದೇಶಾದ್ಯಂತ ಇರುವ ಸ್ಥಿರಾಸ್ತಿ ಮಾರಾಟ ಮಾಡಲು ಆಡಳಿತ ಮಂಡಳಿ ಮುಂದಾಗಿತ್ತು. ಈ ವಿಷಯ ಭಾರಿ ಸದ್ದು ಮಾಡಿತ್ತಲ್ಲದೇ, ಆಡಳಿತ ಮಂಡಳಿ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಆಂಧ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಟಿಟಿಡಿ ನಿರ್ಧಾರವನ್ನ ತಡೆ ಹಿಡಿದಿತ್ತು.