ಆಸ್ಟ್ರೇಲಿಯಾ: ದಕ್ಷಿಣ ಪೆಸಿಫಿಕ್ ವಲಯದ ಸಮುದ್ರದಲ್ಲಿ 7.7 ರಿಕ್ಷರ್ ಮಾಪನ ತೀವ್ರತೆಯ ಅತಿ ಪ್ರಬಲವಾದ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಈ ಪ್ರಬಲ ಭೂಕಂಪದ ಕಾರಣದಿಂದ ಭಾರಿ ಪ್ರಮಾಣದ ಸುನಾಮಿ ಅಲೆಗಳು ಸೃಷ್ಟಿಯಾಗಿವೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಖಚಿತ ಪಡಿಸಿದೆ.
ಆಸ್ಟ್ರೇಲಿಯಾದ ಪೂರ್ವ ದಿಕ್ಕಿನಲ್ಲಿ 550 ಕಿಮೀ ದೂರವಿರುವ ಲಾರ್ಡ್ ಹೋವೆ ದ್ವೀಪಕ್ಕೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ 7.7 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿರುವುದನ್ನು ಅಮೆರಿಕ ಜಿಯಾಲಾಜಿಕಲ್ ಸರ್ವೆ ಇಲಾಖೆ ಕೂಡ ದೃಢಪಡಿಸಿದ್ದು, ನ್ಯೂಜಿಲೆಂಡ್, ವನಾವುಟು, ನ್ಯೂ ಕ್ಯಾಲೆಡೋನಿಯಾ ಮತ್ತು ಈ ಭಾಗದ ಇತರ ದೇಶಗಳಿಗೆ ಸುನಾಮಿಯ ಅಪಾಯವಿದೆ ಎಂದು ಹೇಳಿದೆ.
ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಗುರುವಾರ ಮಧ್ಯರಾತ್ರಿ (ಜಿಎಂಟಿ ಬುಧವಾರ 1320 ಗಂಟೆಗೆ) ನ್ಯೂ ಕ್ಯಾಲೆಡೋನಿಯಾದ ವಾಯೋ ಪ್ರದೇಶದ ಪೂರ್ವ ದಿಕ್ಕಿನಲ್ಲಿ 415 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಸಮುದ್ರದಲ್ಲಿ ಸುಮಾರು 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಮುಂದಿನ ಮೂರು ಗಂಟೆಗಳಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ.