ನವದೆಹಲಿ: ಎರಡು ದಿನಗಳ ಭಾರತದ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ವಿಶ್ವದ ದೊಡ್ಡಣ್ಣ ಅನೇಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಿಎಎ,ಎನ್ಆರ್ಸಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಉಭಯ ದೇಶದ ನಾಯಕರು ಸರಿಸುಮಾರು 5 ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ಈ ವೇಳೆ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಯಿತು. 3 ಬಿಲಿಯನ್ ಡಾಲರ್ ರಕ್ಷಣೆ ಒಪ್ಪಂದ, ಭದ್ರತೆ,ಇಂಧನ, ತಂತ್ರಜ್ಞಾನ,ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಟ್ರಂಪ್ ಮಾಹಿತಿ ನೀಡಿದರು. ಇದೇ ವೇಳೆ ಆಫ್ಘನ್ ಒಪ್ಪಂದದ ಬಗ್ಗೆ ಮಾತನಾಡಿದ ಟ್ರಂಪ್, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಎನ್ಆರ್ಸಿ,ಸಿಎಎ ಬಗ್ಗೆ ಟ್ರಂಪ್ ಹೇಳಿದ್ದೇನು?
ದೇಶದಲ್ಲಿನ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಪ್ರಧಾನಿ ಮೋದಿ ಜತೆ ಯಾವುದೇ ಮಾತುಕತೆ ನಡೆಸಿಲ್ಲ. ಈ ನಗ್ಗೆ ಮಾತನಾಡುವ ಅಗತ್ಯವೂ ಇಲ್ಲ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇದೇ ವೇಳೆ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಹ ನಾನು ಕೇಳಿದ್ದೇನೆ ಎಂದರು. ಅಭಿವೃದ್ಧಿ ವಿಷಯದಲ್ಲಿ ಭಾರತ ಉತ್ತಮ ಕೆಲಸ ಮಾಡುತ್ತಿದ್ದು, ಬರುವ ದಿನಗಳಲ್ಲಿ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದರು. ಇದೇ ವೇಳೆ, ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡುವುದು ಭಾರತಕ್ಕೆ ಚನ್ನಾಗಿ ಗೊತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿಗೆ ಹೇಳುವ ಅವಶ್ಯಕತೆ ಇದೆ ಎಂದು ಎನಿಸುವುದಿಲ್ಲ ಎಂದರು.
ಕಾಶ್ಮೀರ ವಿಚಾರವಾಗಿ ಟ್ರಂಪ್ ಮಾತು
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಉತ್ತಮ ಸಂಬಂಧವಿದೆ. ಈ ಎರಡು ದೇಶದ ಪ್ರಧಾನಿಗಳು ನನಗೆ ಉತ್ತಮ ಗೆಳೆಯರಾಗಿದ್ದು, ಎರಡು ದೇಶಗಳ ಮೇಲೆ ನನಗೆ ಗೌರವವಿದೆ. ಕಾಶ್ಮೀರ ಸಮಸ್ಯೆ ಬಗೆಹರಿಸಲು ನಾನು ಆಸಕ್ತಿ ಹೊಂದಿದ್ದು, ಎರಡು ದೇಶಗಳ ಹಿತಕ್ಕಾಗಿ ಅವಶ್ಯಕತೆ ಬಿದ್ದರೆ ಮಧ್ಯಸ್ಥಿಕೆ ವಹಿಸುವೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.