ನವದೆಹಲಿ: ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಚುನಾವಣೆ ಮುಗಿದ ಬಳಿಕ ಈಶಾನ್ಯದಲ್ಲಿ ಪ್ರತಿದಾಳಿ, ಭಯೋತ್ಪಾದನೆ ನಿಗ್ರಹ ಮತ್ತು ಆಂತರಿಕ ಭದ್ರತೆಗಾಗಿ ನಿಯೋಜಿಸಲಾಗಿರುವ ಪಡೆಗಳನ್ನು ಕಡಿತಗೊಳಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಹೇಳಿದ್ದಾರೆ.
ಈಗಾಗಲೇ ಈ ಪ್ರದೇಶದಿಂದ ಎರಡು ಬೆಟಾಲಿಯನ್ಗಳನ್ನ ವಾಪಸ್ ಪಡೆದಿದ್ದೇವೆ. ಮುಂದೆ ಬೋಡೋಲ್ಯಾಂಡ್ ಚುನಾವಣೆ ಬಳಿಕ ಇನ್ನಷ್ಟು ಬೆಟಾಲಿಯನ್ಗಳನ್ನ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಭೂಸೇನಾ ಮುಖ್ಯಸ್ಥ ನರವನೆ ಹೇಳಿದರು. ಇನ್ನೂ ಜಮ್ಮು ಮತ್ತು ಕಾಶ್ಮೀರದ ಭದ್ರತೆಗೆ ಸಂಬಂಧಿಸಿದಂತೆ 370ನೇ ವಿಧಿ ರದ್ದಾದ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.
ಎನ್‌ಡಿಎಫ್‌ಬಿ ಎಂಬ ನಿಷೇಧಿತ ಸಂಘಟನೆಯ ಎಲ್ಲ ಬಣಗಳ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರ ಸೋಮವಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಎನ್‌ಡಿಎಫ್‌ಬಿಯ ಪ್ರಮುಖ ರಾಜಕೀಯ ಮತ್ತು ಆರ್ಥಿಕ ಬೇಡಿಕೆಗಳನ್ನು ಈಡೇರಿಸುವ ಉದ್ದೇಶ ಹೊಂದಿರುವ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶಾ, ಹೊಸ ಅಭಿವೃದ್ಧಿಯು ಅಸ್ಸಾಂ ಮತ್ತು ಬೋಡೋ ಜನರಿಗೆ ಉತ್ತಮ ಭವಿಷ್ಯವನ್ನು ಒದಗಿಸಲಿದೆಯೆಂದು ಹೇಳಿದ್ದರು.
ಜನವರಿ 30 ರಂದು ಸುಮಾರು 1550 ಎನ್‌ಡಿಎಫ್‌ಬಿ ಕಾರ್ಯಕರ್ತರು ಶರಣಾಗಲಿದ್ದಾರೆ ಎಂದು ಶಾ ಹೇಳಿದ್ದಾರೆ. ಎಲ್ಲಾ ಬೇಡಿಕೆಗಳನ್ನು ಸಮಯಾನುಸಾರವಾಗಿ ಕಾನೂನುಪ್ರಕಾರ ಪೂರೈಸಲಾಗುವುದೆಂದು ಎನ್‌ಡಿಎಫ್‌ಬಿ ಕಾರ್ಯಕರ್ತರಿಗೆ ಶಾ ಭರವಸೆ ಸಹ ನೀಡಿದ್ದಾರೆ.
ಅಸ್ಸೋಂನಲ್ಲಿ ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯಕ್ಕಾಗಿ ಚಳವಳಿ ಪ್ರಾರಂಭವಾದಾಗಿನಿಂದ ಕಳೆದ 27 ವರ್ಷಗಳಲ್ಲಿ ಸಹಿ ಹಾಕಿದ ಮೂರನೇ ಬೋಡೋ ಒಪ್ಪಂದ ಇದಾಗಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ ಅಸ್ಸೋಂನಲ್ಲಿ ಸುಮಾರು ಐದು ದಶಕಗಳಿಂದ ನಡೆಯುತ್ತಿದೆ.