ಗುರುಗ್ರಾಮ್ : ಟ್ರಾನ್ಸ್‌ಜೆಂಡರ್‌ಗಳಿಗೂ ಭದ್ರತಾ ಪಡೆಗಳಲ್ಲಿ ಸೇರಲು ಅವಕಾಶ ನೀಡಲಾಗುವುದು ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾನಿರ್ದೇಶಕ ಎಸ್ ಎಸ್ ದೇಸ್ವಾಲ್ ಭಾನುವಾರ ಹೇಳಿದ್ದಾರೆ.
"ಟ್ರಾನ್ಸ್‌ಜೆಂಡರ್ಸ್ ಸಹ ಮಾನವರು. ಅವರು ಗೌರವಾನ್ವಿತವಾಗಿ ಜೀವನ ನಡೆಸಲು ಉದ್ಯೋಗಾವಕಾಶಗಳನ್ನು ಪಡೆಯಬೇಕು. ಇದು ಒಳ್ಳೆಯ ನಿರ್ಧಾರ" ಎಂದು ದೇಶ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
ಅಲ್ಲದೇ ಭಯೋತ್ಪಾದಕರು ದೇಶದ ಒಳಗೆ ನುಸುಳಲು ಪ್ರಯತ್ನಿಸುವ ಮೂಲಕ, ದೇಶದಾದ್ಯಂತ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಗಡಿಯುದ್ದಕ್ಕೂ ತಂದು ದೇಶವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಬಿಎಸ್ಎಫ್ ಯಾವಾಗಲೂ ಸಿದ್ಧವಾಗಿದೆ ಎಂದು ಡಿಜಿ ದೇಸ್ವಾಲ್ ಹೇಳಿದರು.