ನವದೆಹಲಿ: ಕೊರೊನಾ ಲಾಕ್ಡೌನ್ ನಿಂದಾಗಿ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಸಹಾಯ ಒದಗಿಸುವ ಸಲುವಾಗಿ ಪ್ರವಾಸೋದ್ಯಮ ಸಚಿವಾಲಯವು ಅವರಿಗೆ ಭಾರತದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡಲು ಪೋರ್ಟಲ್ ಒಂದನ್ನು ಪ್ರಾರಂಭಿಸಿದೆ.
''ಸ್ಟ್ರಾಂಡೆಡ್ ಇನ್ ಇಂಡಿಯಾ'' (Stranded in India ) ಎಂಬ ಹೆಸರಿನ ಪೋರ್ಟಲ್ ಆರಂಭಿಸಲಾಗಿದ್ದು, ದೇಶದ ನಾನಾ ಭಾಗಗಳಲ್ಲಿ ಸಿಲುಕಿರುವ ಹೊರ ದೇಶಗಳ ಪ್ರವಾಸಿಗರಿಗೆ ಇದು ಸಹಾಯಕ ಜಾಲವಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪೋರ್ಟಲ್ COVID-19 ಸಹಾಯವಾಣಿ ಸಂಖ್ಯೆಗಳು ಅಥವಾ ಕಾಲ್ - ಸೆಂಟರ್ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಲಿದೆ. ಇದರಿಂದ ವಿದೇಶಿ ಪ್ರವಾಸಿಗರಿಗೆ ಸಹಾಯವಾಗಲಿದೆ. ಇದು ವಿದೇಶಾಂಗ ಸಚಿವಾಲಯದ ನಿಯಂತ್ರಣ ಕೇಂದ್ರಗಳ ಮಾಹಿತಿಯೊಂದಿಗೆ ಅವರ ಸಂಪರ್ಕ ಮಾಹಿತಿ ಮತ್ತು ರಾಜ್ಯ ಆಧಾರಿತ / ಪ್ರಾದೇಶಿಕ ಪ್ರವಾಸೋದ್ಯಮ ಮೂಲಸೌಕರ್ಯಗಳ ಮಾಹಿತಿಯನ್ನು ಹೊಂದಿದೆ. ಹೆಚ್ಚಿನ ಮಾಹಿತಿಯ ಅಗತ್ಯವಿರುವವರಿಗೆ ಸಹಾಯವನ್ನು ವಿಸ್ತರಿಸಲು ಮತ್ತು ವಿದೇಶಿ ಪ್ರವಾಸಿಗರನ್ನು ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಿಸಲು ಇದು ಸಹಾಯ ಮಾಡುವ ವಿಭಾಗವನ್ನು ಸಹ ಹೊಂದಿದೆ.
ಪ್ರವಾಸೋದ್ಯಮ ವೆಬ್‌ಸೈಟ್ ಮತ್ತು ಪ್ರಮುಖ ಪ್ರವಾಸೋದ್ಯಮ ಸಚಿವಾಲಯಗಳಲ್ಲಿ ಈ ವೆಬ್‌ಸೈಟ್ ಕಾಣಿಸಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.