ನವದೆಹಲಿ: ಭಾರತದ ಕೋವಿಡ್ ಹೋರಾಟ ವಿಜಯದೆಡೆ ಸಾಗುತ್ತಿದೆ. 78 ಲಕ್ಷ ಸೋಂಕಿತರ ಪೈಕಿ 70 ಲಕ್ಷಕ್ಕೂ ಹೆಚ್ಚು ಮಂದಿ ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಆ್ಯಕ್ಟಿವ್ ಕೇಸ್ಗಳು 7 ಲಕ್ಷ ಗಡಿಯಿಂದ ಕೆಳಗಿಳಿದಿದೆ.
ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಕೂಡ ದಿನೇ ದಿನೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 53,370 ಸೋಂಕಿತರು ಪತ್ತೆಯಾಗಿದ್ದು, 650 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 78,14,682 ಹಾಗೂ ಮೃತರ ಸಂಖ್ಯೆ 1,17,956ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 70,16,046 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 6,80,680 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 23ರ ವರೆಗೆ 10,13,82,564 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 12,69,479 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.