ನವದೆಹಲಿ: ಕೊರೊನಾ ಹೊಸ ಪ್ರಬೇಧದ ಸೋಂಕು ತಗುಲಿರುವ ಒಟ್ಟು 71 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, "ಸೋಂಕಿತ ವ್ಯಕ್ತಿಗಳನ್ನು ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳ ಕೊಠಡಿಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಂಕಿತರ ಜೊತೆ ಪ್ರಯಾಣ ಬೆಳೆಸಿದವರು, ಪ್ರಾಥಮಿಕ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ" ಎಂದು ತಿಳಿಸಿದೆ.
ಡಿಸೆಂಬರ್ 29ರಂದು ಬ್ರಿಟನ್ನಿಂದ ಭಾರತಕ್ಕೆ ವಾಪಸ್ ಆಗಿದ್ದ 6 ಮಂದಿಯಲ್ಲಿ ಕೊರೊನಾ ಹೊಸ ಪ್ರಬೇಧ ಪತ್ತೆಯಾಗಿತ್ತು. ಇದು ಶೇಕಡಾ 70 ರಷ್ಟು ವೇಗವಾಗಿ ಹರಡುತ್ತದೆ ಎಂದು ಈಗಾಗಲೇ WHO ವರದಿ ಮಾಡಿತ್ತು.
ಈಗಾಗಲೇ ಹೊಸ ರೂಪಾಂತರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ ವರದಿ ಮಾಡಿದೆ. ನವೆಂಬರ್ 25ರಿಂದ ಡಿಸೆಂಬರ್ 23 ಮಧ್ಯರಾತ್ರಿಯವರೆಗೆ ಸುಮಾರು 33,000 ಪ್ರಯಾಣಿಕರು ಯುಕೆಯಿಂದ ವಿವಿಧ ಭಾರತೀಯ ವಿಮಾನ ನಿಲ್ದಾಣಗಳ ಮೂಲಕ ದೇಶಕ್ಕೆ ಬಂದಿದ್ದಾರೆ. ಈ ಎಲ್ಲ ಪ್ರಯಾಣಿಕರನ್ನು ಆಯಾಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಆರ್‌ಟಿ - ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಿವೆ. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ.