ಮುಂಬೈ: ಇಂದು ಅಧಿವೇಶನ ಪುನರಾರಂಭಗೊಳ್ಳಲಿದ್ದು, ಇವತ್ತಾದರೂ ಸಿಎಂ ವಿಶ್ವಾಸ ಮತ ಯಾಚನೆ ಮಾಡುತ್ತಾರೋ, ಇಲ್ಲವೋ ಎಂಬ ಆತಂಕ ಅಜ್ಞಾತ ಸ್ಥಳದಲ್ಲಿರುವ ಅತೃಪ್ತ ಶಾಸಕರನ್ನು ಕಾಡ್ತಾ ಇದೆ. ಇನ್ನು ಸಿಎಂ ಕುಮಾರಸ್ವಾಮಿಯವರ ಆಹ್ವಾನಕ್ಕೂ ಅತೃಪ್ತರು ಡೋಂಟ್ ಕೇರ್ ಎಂದಂತಿದೆ.
ಮುಂಬೈನ ಅಜ್ಞಾತ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತರಿಗೆ ಇಂದು ಮಹತ್ವದ ದಿನ. ಕಳೆದ ಮೂರು ದಿನಗಳಿಂದ ಆತಂಕ, ಕಾತರದಿಂದ ಕಾಲ ಕಳೆಯುತ್ತಿರುವ ಅತೃಪ್ತರಿಗೆ ಇವತ್ತಾದರೂ ಅಜ್ಞಾತ ವಾಸದಿಂದ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಸಿಎಂ ಇವತ್ತಾದರೂ ವಿಶ್ವಾಸ ಮತ ಯಾಚಿಸುತ್ತಾರೋ, ಅಥವಾ ದೋಸ್ತಿಗಳು ಮತ್ತೆ ಚರ್ಚೆ ಹೆಸರಲ್ಲಿ ಕಾಲಹರಣ ಮಾಡುತ್ತಾರೋ ಎಂಬ ಭಯ, ಅನಿಶ್ಚಿತತೆಯಲ್ಲಿ ತಲೆಕಡೆಸಿಕೊಂಡಿದ್ದಾರೆ.
ಸಿಎಂ ಆಹ್ವಾನಕ್ಕೆ ಡೋಂಟ್ ಕೇರ್!
ಮತ್ತೆ ವಾಪಸ್ ಬನ್ನಿ, ಅಧಿವೇಶನದಲ್ಲಿ ಪಾಲ್ಗೊಳ್ಳಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ನಿನ್ನೆ ಕೊನೆಯ ಪ್ರಯತ್ನ ಎಂಬಂತೆ ಅತೃಪ್ತರಿಗೆ ಆಹ್ವಾನ ಕೊಟ್ಟಿದ್ದರು. ಆದರೆ ಸಿಎಂ ಆಹ್ವಾನಕ್ಕೂ ಅತೃಪ್ತರು ಕ್ಯಾರೆ ಅನ್ನುತ್ತಿಲ್ಲ. ಸಿಎಂ ಆಹ್ವಾನಕ್ಕೂ ಜಗ್ಗದೆ, ನಮ್ಮ ನಿರ್ಧಾರಕ್ಕೆ ಅಚಲರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ಆಹ್ವಾನಕ್ಕೆ ಅತೃಪ್ತರು ಸೊಪ್ಪು ಹಾಕಿಲ್ಲ.
ಕುಟುಂಬದವರ ಮೂಲಕ ಅತೃಪ್ತರನ್ನು ದೋಸ್ತಿಗಳು ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಅದೂ ವಿಫಲವಾಗಿದೆ. ವಿಶ್ವಾಸ ಮತಯಾಚನೆ ಮುಗಿಯುವ ತನಕ ನಾವು ವಾಪಸಾಗಲ್ಲ ಎಂದು ಅತೃಪ್ತ ಶಾಸಕರು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ನಿನ್ನೆಯಷ್ಟೇ ಮುಂಬೈನ ಅಜ್ಞಾತ ಸ್ಥಳದಿಂದಲ್ಲೇ ವಿಡಿಯೋ ಸಂದೇಶದಲ್ಲಿ ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದರು.