ಮುಂಬೈ: ಸಾಯಿಬಾಬಾ ಜನ್ಮಸ್ಥಳವಾಗಿ ಪರಭಾನಿ ಜಿಲ್ಲೆಯ ಪಾತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್ಗೆ ಕರೆ ನೀಡಿದ್ದಾರೆ. ಬಂದ್ ನಡುವೆಯೂ ಶಿರಡಿ ದೇಗುಲ ಎಂದಿನಂತೆಯೇ ತೆರೆದಿದ್ದು, ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀ ಸಾಯಿ ಸಂಸ್ಥಾನ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಮಧುಕರ್ ಮುಗ್ಲಿಕರ್, ಬಂದ್ ಇದ್ದರೂ ಸಾಯಿ ಬಾಬಾ ದೇವಸ್ಥಾನ ಎಂದಿನಂತೆ ತೆರೆದಿರುತ್ತದೆ. ಶಿರಡಿ ನಗರ ಬಂದ್ನಿಂದ ದೇವಸ್ಥಾನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂದು ದೇವಸ್ಥಾನ ಬಾಗಿಲು ತೆರೆಯುವುದಿಲ್ಲ ಎಂಬುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಪರಭಾನಿಯ ಪಾತ್ರಿಯನ್ನು ಸಾಯಿಬಾಬಾರವರ ಜನ್ಮ ಸ್ಥಳ, ಅದನ್ನು ಧಾರ್ಮಿಕ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿಪಡಿಸುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡರುವ ಹೇಳಿಕೆ ವಿರುದ್ಧ ಶಿರಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್ಗೆ ಕರೆ ನೀಡಿದ್ದಾರೆ. ಶಿರಡಿ ದೇಶದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತೀವರ್ಷ ಲಕ್ಷಾಂತರು ಭಕ್ತರು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆಯುತ್ತಾರೆ.