ನವದೆಹಲಿ: ನೂತನ ಸಂಸದೆಯಾಗಿ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ನ ನುಸ್ರತ್ ಜಹಾನ್ ಇಂದು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇವರೊಂದಿಗೆ ಮಿಮಿ ಚಕ್ರವರ್ತಿ ಕೂಡ ಪ್ರಮಾಣ ಸ್ವೀಕಾರ ಮಾಡಿದರು.
ನುಸ್ರತ್ ಜಹಾನ್ ಬಸಿರ್ಹತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಗೆಲುವು ದಾಖಲು ಮಾಡಿದ್ದರು. ಮಿಮಿ ಚಕ್ರಬರ್ತಿ ಪಶ್ಚಿಮ ಬಂಗಾಳದ ಜಾಧವ್ಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲು ಮಾಡಿದ್ದರು. ಮೊನ್ನೆ ಪಶ್ಚಿಮ ಬಂಗಾಳದ ಈ ಇಬ್ಬರು ಹೊಸ ಯುವ ಸಂಸದೆಯರು ಹಾಗೂ ಸಿನಿಮಾ ನಟಿಯರೂ ಆಗಿರುವ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ ಸಂಸದೆಯರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
ವಿಶೇಷ ಎಂದರೆ ನುಸ್ರತ್ ಜಹಾನ್ ಸೀರೆಯುಟ್ಟುಕೊಂಡು, ಹಣೆಗೆ ಸಿಂಧೂರ ಹಾಕಿಕೊಂಡು, ಗಮನ ಸೆಳೆದರು. ನುಸ್ರತ್‌ರ ಗೆಳತಿ, ಬಂಗಾಳದ ಇನ್ನೋರ್ವ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರು ಸಹ ಪ್ರಮಾಣವಚನ ಸ್ವೀಕರಿಸಿದರು. ಮಿಮಿ ಅವರು ಕಲಾಪಕ್ಕೆ ಗೈರಾಗಿ ನುಸ್ರತ್ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಟರ್ಕಿಗೆ ತೆರಳಿದ್ದರು.
ನುಸ್ರತ್ ಜಹಾನ್ ಕಳೆದ ಬುಧವಾರ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಇಂದು ಇಬ್ಬರು ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.