ಗಲ್ಲಿಗೇರಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂದು ಸಿನಿಮಾಗಳಲ್ಲಿ ನೀವು ನೋಡಿರಬಹುದು. ವಾಸ್ತವದಲ್ಲಿ ಹಾಗಿದೆಯೇ? ಹೀಗೊಂದು ಪ್ರಶ್ನೆ ಮಾಡಿಕೊಂಡರೆ ಕರಾರುವಕ್ಕಾಗಿ ಹೌದೆಂದು ಹೇಳಲು ಸಾಧ್ಯವಿಲ್ಲ.
ದೆಹಲಿಯ ಜೈಲ್ ಮ್ಯಾನ್ಯುವಲ್ ತೆಗೆದುನೋಡಿದರೆ ಗಲ್ಲಿಗೇರಿಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬ ಚಿತ್ರಣ ನಿಮ್ಮ ಕಣ್ಣಮುಂದೆ ಬಂದು ನಿಲ್ಲುತ್ತದೆ.
ವಿಶೇಷ ಸೆಲ್: ಗಲ್ಲಿಗೇರಲಿರುವ ಅಪರಾಧಿಗಳನ್ನು ವಿಶೇಷ ಸೆಲ್ನಲ್ಲಿ ಇಡಲಾಗಿರುತ್ತದೆ. ಪ್ರತಿ ದಿನ ನಾಲ್ಕು ಶಿಫ್ಟ್ಗಳಿದ್ದು ಪ್ರತಿ ಶಿಫ್ಟ್ನ ಮುಖ್ಯಸ್ಥನ ಕೈಲಿ ಈ ಸೆಲ್ಗಳ ಕೀ ಇರುತ್ತದೆ.
ಅಲಾರಂ ಸದ್ದು: ಗಲ್ಲಿಗೇರುವ ದಿನ ಬೆಳಗ್ಗೆ 5.20ಕ್ಕೆ ಒಂದು ಅಲಾರಂ ಸದ್ದು ಕೇಳುತ್ತದೆ. ಆಗ ಸಿಬ್ಬಂದಿ ಸೆಲ್ ಬಳಿ ಹೋಗಿ ನಿಲ್ಲುತ್ತಾರೆ. ನಿಗದಿತ ಸಮಯದೊಳಗೆ ಕೈದಿಗಳಿಗೆ ಸ್ನಾನ ಮಾಡಿಸಿ ಸಿದ್ಧಗೊಳಿಸುವುದು ಅವರ ಜವಾಬ್ದಾರಿ ಆಗಿರುತ್ತದೆ. ಈ ವೇಳೆ ಯಾವುದೇ ಕಾರಣಕ್ಕೂ ಗಲ್ಲಿಗೇರಿಸುವ ಪ್ರಕ್ರಿಯೆ ತಡವಾಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ.
ಹೆಸರು ಖಚಿತ ಪ್ರಕ್ರಿಯೆ, ಕೈದಿಗಳ ಮುಂದೆ ವಾರೆಂಟ್ ಓದುವುದು: ಗಲ್ಲಿಗೇರಲು ಕೆಲವು ನಿಮಿಷಗಳಿದ್ದಂತೆ ಸೂಪರಿಡೆಂಟ್ ಹಾಗೂ ಡೆಪ್ಯುಟಿ ಸೂಪರಿಡೆಂಟ್ ಕೈದಿಗಳನ್ನು ಭೇಟಿಯಾಗುತ್ತಾರೆ. ಅವರ ಮುಂದೆ ಬ್ಲ್ಯಾಕ್ ವಾರೆಂಟ್ ಓದುತ್ತಾರೆ. ಅವರ ಹೆಸರುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಗಲ್ಲು ಪ್ರಕ್ರಿಯೆ ಜರುಗುವಾಗ ಇತರೆ ಸೆಲ್ನಲ್ಲಿರುವ ಕೈದಿಗಳು ಎಲ್ಲಿಯೂ ಹೋಗುವಂತಿಲ್ಲ. ಆ ರೀತಿ ಇಡೀ ಜೈಲನ್ನು ಲಾಕ್ ಡೌನ್ ಮಾಡಲಾಗಿರುತ್ತದೆ.
ಕೈ ಕಟ್ಟಿಹಾಕುವ ಪ್ರಕ್ರಿಯೆ: ಹೆಸರು ಖಚಿತಪಡಿಸಿದ ನಂತರ ಕೈದಿಯ ಕೈಯ್ಯನ್ನು ಹಗ್ಗದಿಂದ ಹಿಂದಕ್ಕೆ ಕಟ್ಟಲಾಗುತ್ತದೆ. ಈ ಸಮಯದಲ್ಲಿ ಅವರ ಕೈಗೆ ಹಾಗೂ ಕಾಲಿಗೆ ತೊಡಿಸಲಾಗಿರುವ ಕಬ್ಬಿಣದ ಬೇಡಿಗಳನ್ನು ತೆಗೆದುಹಾಕಲಾಗುತ್ತದೆ. ಅದೇ ಸಮಯಕ್ಕೆ ಅವರ ಮುಖಕ್ಕೆ ಕಪ್ಪ ಬಟ್ಟೆಯನ್ನು ತೊಡಿಸಲಾಗುತ್ತದೆ.
ಗಲ್ಲುಗಂಬದತ್ತ: ಜೈಲಿನ ಅಧಿಕಾರಿಗಳು, ಡೆಪ್ಯುಟಿ ಸೂಪರಿಡೆಂಟ್, ವಾರ್ಡರ್ ಮುಖ್ಯಸ್ಥ ಹಾಗೂ 6 ವಾರ್ಡರ್ಗಳು ಕೈದಿಗಳೊಂದಿಗೆ ಗಲ್ಲು ಕಂಬದ ಬಳಿ ನಡೆದುಹೋಗುತ್ತಾರೆ.
ಗಲ್ಲಿಗೇರಿಸಿದ ವರದಿ: ಗಲ್ಲು ಪ್ರಕ್ರಿಯೆ ಮುಗಿದ ನಂತರ ಕೋರ್ಟ್ ನಿಗದಿಪಡಿಸಿರುವ ಸಮಯದೊಳಗಾಗಿ ಗಲ್ಲಗೇರಿಸಿರುವ ಕುರಿತು ಸೂಪರಿಡೆಂಟ್ ಕೂಡಲೇ ಇನ್ಸ್ಪೆಕ್ಟರ್ ಜನರಲ್ ಅವರಿಗೆ ಒಂದು ವರದಿ ಕೊಡಬೇಕು.
ವೈದ್ಯಕೀಯ ಪರೀಕ್ಷೆ, ಶವ ಹಸ್ತಾಂತರ: ಗಲ್ಲಿಗೇರಿದ 30 ನಿಮಿಷಗಳ ನಂತರ ಕೈದಿಗಳು ಸಾವಿಗೀಡಾಗಿರುವುದನ್ನು ಖಚಿತಪಡಿಸಿಕೊಳ್ಳಲು ಒಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆ ನಂತರ ಶವಪರೀಕ್ಷೆ ಜರುಗುತ್ತದೆ. ಇದಾದ ಮೇಲೆ ಶವಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗುತ್ತದೆ.