ಪಶ್ಚಿಮ ಬಂಗಾಳ: ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನವನ, ವಿಶ್ವದಲ್ಲೇ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿದೆ. ಇದು ಹುಲಿ ಸಂರಕ್ಷಿತ ಮತ್ತು ಜೀವ ವೈವಿಧ್ಯ ತಾಣವಾಗಿದ್ದು, ಬಾಂಗ್ಲಾ ಮತ್ತು ಭಾರತ ದೇಶದಲ್ಲಿ ಹರಡಿಕೊಂಡಿದೆ. ಸುಂದರ್ ಬನ್ಸ್ ಕಾಡಿನ ಅಂಚಿನ ಗ್ರಾಮಗಳಲ್ಲಿ, ನರ ಭಕ್ಷಕ ಹುಲಿಯ ದಾಳಿಗೆ ಅನೇಕ ಜನರು ಬಲಿಯಾಗುತ್ತಾರೆ. ಆ ಪ್ರದೇಶಗಳಲ್ಲಿ ನರ ಭಕ್ಷಕ ಹುಲಿಯಿಂದ ತಮ್ಮ ಪತಿಯನ್ನು ಕಳೆದುಕೊಂಡವರನ್ನು 'ಹುಲಿ ವಿಧವೆ'ಯರು ಎಂದು ಕರೆಯುತ್ತಾರೆ.
ಆ ಅರಣ್ಯದ ಸುತ್ತಲಿನ ಜನರು ಮೀನುಗಾರಿಕೆಗೆ ಹೋಗುತ್ತಾರೆ. ಏಡಿಗಳನ್ನು ಹಿಡಿಯುವುದು ಹಾಗೂ ಜೇನು ತುಪ್ಪವನ್ನು ಸಂಗ್ರಹಿಸುವುದು ಅವರ ನಿತ್ಯ ಕಾಯಕ. ಹಸಿವಿನ ವಿರುದ್ಧ ಹೋರಾಡಲು ಅವರಿಗೆ ಮ್ಯಾಂಗ್ರೋವ್ ಅರಣ್ಯಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಅವರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದು, ಮತ್ತು ಹುಲಿ ವಿಧವೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ.
ಅಲ್ಲಿನ ನೇತಿಧುಪಾನಿ, ಪೀರ್ಖಾಲಿ ಮತ್ತು ಹತ್ತಿರದ ಇತರ ಹಳ್ಳಿಗಳಲ್ಲಿ ಹುಲಿ ವಿಧವೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೀನುಗಾರಿಕೆಗೆ ಹೋದ ಅನೇಕರು ಹಿಂತಿರುಗಿ ಬಂದಿಲ್ಲ. ಪತಿಯು ಮರಳಿ ಬರಲ್ಲ ಎಂದು ತಿಳಿದ ಪತ್ನಿಯರು ತಮ್ಮ ಗಂಡನ ನೆನಪುಗಳೊಂದಿಗೆ ಜೀವಿಸುತ್ತಿದ್ದಾರೆ. ಬಡತನವು ಈ ಜನರನ್ನು ಬೆಂಬಿಡದೆ ಕಾಡುತ್ತಿದೆ. ಆದ್ದರಿಂದ ಅವರು ಕಾಡಿಗೆ ಹೋಗಿ, ಅಪಾಯವನ್ನು ಮೈ ಮೇಲೆ ಹಾಕಿಕೊಳ್ಳುತ್ತಾರೆ. ಕಾಡಿನಲ್ಲಿ ಮೃತ ಪಟ್ಟ ಕೆಲ ಮೃತ ದೇಹಗಳು ಕಂಡು ಹಿಡಿಯದ ಸ್ಥಿತಿಯಲ್ಲಿ ಪತ್ತೆಯಾಗುತ್ತವೆ.
ಅರಣ್ಯ ಇಲಾಖೆಯ ಅಧಿಕಾರಿಗಳು, ಎಷ್ಟು ಸಾರಿ ಎಚ್ಚರಿಕೆ ನೀಡಿದರೂ, ಮೀನುಗಾರಿಕೆಗಾಗಿ ಕಾಡಿನೊಳಗೆ ಹೋಗುತ್ತಾರೆ. ಏಡಿಗಳನ್ನು ಮಾರಾಟ ಮಾಡಿದರೆ ಹೆಚ್ಚು ಹಣ ಸಿಗುತ್ತದೆ ಎಂದು ಅಪಾಯವನ್ನು ತಂದೊಡ್ಡುಕೊಳ್ಳುತ್ತಾರೆ. ಅಲ್ಲಿನ ಜನರು ಬದುಕುಳಿಯಲು ಕಾಡಿಗೆ ಹೋಗುವ ಅನಿವಾರ್ಯತೆಯಿದೆ. ಇದರಿಂದಾಗಿ ಅಲ್ಲಿನ ಗ್ರಾಮಗಳು ಪ್ರತಿದಿನ ಶೋಕಿಸುವುದು ತಪ್ಪಿಲ್ಲ. ಸರ್ಕಾರ ಈ ಕುರಿತು ಕ್ರಮ ಕೈಗೊಂಡು ಆ ಬಡಪಾಯಿಗಳಿಗೆ ಆಸರೆಯಾಗಬೇಕಿದೆ.