ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಗಟ್ಟಿಯಾಗಿದ್ದು, ಇದು ಇನ್ನಷ್ಟು ಸಧೃಡವಾಗಲಿದೆ ಹಾಗೂ ಅಮೆರಿಕಾಕ್ಕೆ ಭಾರತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ(ಪಿಎಂಒ) ತಿಳಿಸಿದೆ.
ದೂರವಾಣಿ ಸಂಭಾಷಣೆ ವೇಳೆ, ಪ್ರಧಾನಿ ಮೋದಿ ಹಾಗೂ ಟ್ರಂಪ್ ಹಿಂದಿನ ವರ್ಷ ಉಭಯ ದೇಶಗಳ ನಡುವೆ ನಡೆದ ಒಪ್ಪಂದ, ಹಾಕಿಕೊಂಡ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ವಿಚಾರ ವಿನಿಮಯ ಮಾಡಿಕೊಂಡರು ಎನ್ನಲಾಗಿದೆ. ಇನ್ನು ಪ್ರಧಾನಿ ಮೋದಿ ಅವರ ಪ್ರಸ್ತಾವಗಳಿಗೆ ಟ್ರಂಪ್ ಸಹಮತ ವ್ಯಕ್ತಪಡಿಸಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಭಾರತದ ಬಗ್ಗೆ ಸಂತಸ ವ್ಯಕ್ತಪಡಿಸಿದ ಟ್ರಂಪ್ ಹೊಸ ವರ್ಷದ ಶುಭಾಶಯ ಕೋರಿದ್ದು, ಈ ವರ್ಷ ಇನ್ನಷ್ಟು ಪ್ರಗತಿಯತ್ತ ಭಾರತ ಸಾಗಲಿ ಎಂದು ಹಾರೈಸಿದ್ದಾರೆ. ಜತೆಗೆ ಕಳೆದ ಹಲವಾರು ವರ್ಷಗಳಿನ ಭಾರತದ ಬಾಂಧವ್ಯ ನನಗೆ ತೃಪ್ತಿ ತಂದಿದೆ ಎಂದು ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶ್ವಾಸ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾದ ಭಾರತ ಮತ್ತು ಅಮೆರಿಕದ ಸಂಬಂಧ ದಿನದಿಂದ ದಿನಕ್ಕೆ ಸಧೃಡವಾಗುತ್ತಿದ್ದು, ಈ ಹಿಂದೆ ನಡೆದುಬಂದಂತೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಹಾಗೂ ಇತರ ಎಲ್ಲಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಮುಂದುವರೆಸಲು ಇಚ್ಚಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಪಿಎಂಒ ಕಚೇರಿ ಸ್ಪಷ್ಟಪಡಿಸಿದೆ.